ಬಲ್ಲಿಯಾ( ಉತ್ತರ ಪ್ರದೇಶ): ಯಾವುದೇ ಕಾರಣಕ್ಕೂ ಮದುವೆ ಮಾಡಿಕೊಳ್ಳುವುದಿಲ್ಲ ಎಂಬ ಬ್ರಹ್ಮಚಾರಿ ಪ್ರತಿಜ್ಞೆ ಮಾಡಿದ್ದ ವ್ಯಕ್ತಿಯೊಬ್ಬ ಪಂಚಾಯ್ತಿ ಚುನಾವಣೆಗೋಸ್ಕರ ನಿರ್ಧಾರ ಬದಲಿಸಿಕೊಂಡು ಮದುವೆ ಮಾಡಿಕೊಂಡಿದ್ದರು. ಆದರೆ, ಇದೀಗ ಚುನಾವಣೆಯಲ್ಲೂ ಅವರಿಗೆ ನಿರಾಸೆಯಾಗಿದೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಕರಣರ್ ಚಪ್ರಾ ಗ್ರಾಮದ ನಿವಾಸಿ ಹಾಥಿ ಸಿಂಗ್ ಪಂಚಾಯ್ತಿ ಚುನಾವಣೆಗೆ ಸ್ಪರ್ಧೆ ಮಾಡುವ ಇರಾದೆ ಹೊಂದಿದ್ದರು. ಆದರೆ, ಗ್ರಾಮದ ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ನಿರಾಸೆಗೊಳಗಾಗಿದ್ದರು. ಈ ವೇಳೆ ಕೆಲವರು ಮದುವೆ ಮಾಡಿಕೊಂಡು ಪತ್ನಿಯನ್ನ ಕಣಕ್ಕಿಳಿಸುವಂತೆ ಸೂಚನೆ ನೀಡುತ್ತಿದ್ದಂತೆ ಬ್ರಹ್ಮಚಾರಿ ಪ್ರತಿಜ್ಞೆ ಮುರಿದು ಮದುವೆ ಮಾಡಿಕೊಂಡು ಪತ್ನಿಯನ್ನ ಕಣಕ್ಕಿಳಿಸಿದ್ದನು. ಇದಾದ ಬಳಿಕ ಇಬ್ಬರು ಸೇರಿ ಗ್ರಾಮದಲ್ಲಿ ಅಬ್ಬರದ ಪ್ರಚಾರ ಸಹ ನಡೆಸಿದ್ದರು. ಇದೀಗ ಚುನಾವಣಾ ಫಲಿತಾಂಶ ಬಹಿರಂಗಗೊಂಡಿದ್ದು, ಹಾಥಿ ಸಿಂಗ್ ಪತ್ನಿ ನಿಧಿ ವಿರೋಚಿತ ಸೋಲು ಕಂಡಿದ್ದಾರೆ.
ಇದನ್ನೂ ಓದಿ: ಪಂಚಾಯಿತಿ ಎಲೆಕ್ಷನ್ನೂ, ಬ್ರಹ್ಮಚಾರಿಯ ಮದುವೆ ಕಥೆಯೂ..
ನಿಧಿ ಸಿಂಗ್ ಚುನಾವಣೆಯಲ್ಲಿ 525 ಮತ ಪಡೆದುಕೊಂಡಿದ್ದರೆ, ಇವರ ಪ್ರತಿಸ್ಪರ್ಧಿ ಸೋನಿಕಾ ದೇವಿ 564 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಯಾವುದೇ ಕಾರಣಕ್ಕೂ ವೈವಾಹಿಕ ಜೀವನಕ್ಕೆ ಕಾಲಿಡುವುದಿಲ್ಲ ಎಂಬ ಶಪಥ ಮಾಡಿದ್ದ 45 ವರ್ಷದ ಹಾಥಿ ಸಿಂಗ್ ಚುನಾವಣೆಗೋಸ್ಕರ ಮದುವೆ ಮಾಡಿಕೊಂಡು, ಸೋಲು ಕಂಡಿರುವುದು ಮಾತ್ರ ವಿಪರ್ಯಾಸವೇ ಸರಿ.