ನವದೆಹಲಿ: ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಸೋಂಕಿಗೊಳಗಾಗಿರುವ ಜನರು ಇನ್ನಿಲ್ಲದ ಸಮಸ್ಯೆ ಅನುಭವಿಸುವಂತಾಗಿದೆ. ಇದರಿಂದ ಹೊರಬರಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದ್ದು, ಇದರ ಮಧ್ಯೆ ಅನೇಕ ಸಂಘ - ಸಂಸ್ಥೆ, ಕಂಪನಿ, ವಿವಿಧ ದೇಶ ಹಾಗೂ ಪ್ರಮುಖ ಸೆಲಿಬ್ರೆಟಿಗಳು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.
ಇದೀಗ ಹರ್ಮನ್ ಕಂಪನಿ ಕೂಡ ತನ್ನ ಕೈಲಾದ ಸಹಾಯ ಮಾಡಲು ಮುಂದಾಗಿದ್ದು, ಪಿಎಂ ಕೇರ್ಸ್ ಫಂಡ್ಗೆ 10 ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹರ್ಮನ್ ಕಂಪನಿ ಭಾರತದ ವ್ಯವಸ್ಥಾಪಕ ಪ್ರತಾಪ್ ದೇವನಾಯಘಮ್, ದೇಶದಲ್ಲಿನ ಕೋವಿಡ್ ಬಿಕ್ಕಟ್ಟು ನಿಭಾಯಿಸಲು ನಾವು ನೆರವಾಗುತ್ತಿದ್ದೇವೆ. ಇದಕ್ಕಾಗಿ ಪಿಎಂ ಕೇರ್ಸ್ಗೆ ದೇಣಿಗೆ ನೀಡುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: 45 ನಿಮಿಷದ ಅಂತರದಲ್ಲಿ ಕೋವಿಡ್ನಿಂದ ತಂದೆ-ತಾಯಿ ಸಾವು: ಅಂತ್ಯಕ್ರಿಯೆ ನಡೆಸಿದ ಹೆಣ್ಣು ಮಕ್ಕಳು
ಈ ಹಿಂದೆ ಸಹ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ಹರ್ಮನ್ ಕಂಪನಿ, 8,400 ಉದ್ಯೋಗಿಗಳು ಮತ್ತು ಅವರ ಕುಟುಂಬದವರಿಗೆ ಕೋವಿಡ್ ಲಸಿಕೆ ವೆಚ್ಚ ಭರಿಸುವುದಾಗಿ ಹೇಳಿಕೊಂಡಿತು. ಹರ್ಮನ್ ಇಂಡಿಯಾ ತನ್ನ ಉದ್ಯೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸಲು ಅಪೊಲೊ ಆಸ್ಪತ್ರೆ ಜತೆ ಒಪ್ಪಂದ ಮಾಡಿಕೊಂಡಿದೆ. ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಆರ್ಥಿಕ ನೆರವು ನೀಡುತ್ತಿದೆ.