ಫರಿದಾಬಾದ್(ಹರಿಯಾಣ): ಹಾರ್ಲೆ ಡೇವಿಡ್ಸನ್ ಬೈಕ್ ಎಂದರೆ ಬೈಕ್ ಪ್ರೇಮಿಗಳಿಗಂತೂ ಕ್ರೇಜ್. ಈ ಬೈಕ್ ರೈಡಿಂಗ್ ಎಂದರೆ ಯುವಕರಿಗೆ ಪ್ಯಾಷನ್ ಇರುತ್ತದೆ. ಈ ಬೆಲೆ ಬಾಳುವ ಬೈಕ್ ಖರೀದಿಸಿ, ಓಡಿಸಬೇಕು ಎಂಬುದು ಹಲವರ ಕನಸಾಗಿಯೂ ಇರುತ್ತದೆ. ಹಾಗಿರುವಾಗ ಇಲ್ಲೊಬ್ಬ ಹರಿಯಾಣದ ಫರಿದಾಬಾದ್ನ ಅಮಿತ್ ಭದನಾ ಎನ್ನುವ ವ್ಯಕ್ತಿ ಹಾರ್ಲೆ ಡೇವಿಡ್ಸನ್ ಬೈಕ್ ರೈಡಿಂಗ್ ಮಾತ್ರವಲ್ಲ ಬೈಕ್‌ನಲ್ಲಿ ಹಾಲು ಮಾರುವ ಮೂಲಕ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ.
ಫರಿದಾಬಾದ್ನ ಅಮಿತ್ ಭದನಾ ಅವರು ಹಾರ್ಲೆ ಡೇವಿಡ್ಸನ್ ಬೈಕ್ ನಲ್ಲಿ ಹಾಲಿನ ಕ್ಯಾನ್‌ಗಳನ್ನು ಇರಿಸಿಕೊಂಡು ಮನೆ ಮನೆಗ ಹಾಲು ಹಾಕುತ್ತಿದ್ದಾರೆ. ಇವರು ಹಾರ್ಲೆ ಡೇವಿಡ್ಸನ್ ಬೈಕ್‌ನಲ್ಲಿ ತಮ್ಮ ಬ್ಯುಸಿನೆಸ್ ಕುದುರಿಸುತ್ತಿದ್ದಾರೆ. ಫರಿದಾಬಾದ್ನ ಬೀದಿ ಬೀದಿಗಳಲ್ಲಿ ತಮ್ಮ ಗಿರಾಕಿಗಳ ಮನೆ ಬಾಗಿಲಿಗೆ ಹಾರ್ಲೆ ಡೇವಿಡ್ಸನ್ ಬೈಕ್‌ನಲ್ಲಿ ಹಾಲು ಪೂರೈಸುತ್ತಿದ್ದಾರೆ. ಹೀಗೆ ಬೈಕ್‌ನಲ್ಲಿ ಹಾಲು ಹಾಕುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಬಾಯಲ್ಲೂ ಇವರ ಬಗ್ಗೆಯೇ ಟಾಕ್.
ಇಡೀ ಪಟ್ಟಣವೇ ಅಮಿತ್ ಅವರ ಬಗ್ಗೆಯೇ ಮಾತನಾಡುತ್ತಿದ್ದು, ಎಲ್ಲರೂ ಇವರನ್ನು ಸಾಧಕ ಉದ್ಯಮಿ ಎಂದು ಕರೆಯುತ್ತಿದ್ದಾರೆ. ಯುವಕರು, ಇವರನ್ನು ಯೂತ್ ಐಕಾನ್ ಆಗಿ ನೋಡುತ್ತಿದ್ದಾರೆ. ಇವರ ಬ್ಯುಸಿನೆಸ್ ಸಾಧನೆ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಲು ದೂರದ ಊರುಗಳಿಂದ ಜನ ಬರುತ್ತಾರೆ. ಇವರಂತೆಯೇ ಉದ್ಯಮ ಕ್ಷೇತ್ರದಲ್ಲಿ ಸಾಧಿಸಲು ಅದೆಷ್ಟೋ ಯುವಕರು ಇವರನ್ನು ಭೇಟಿಯಾಗುತ್ತಿದ್ದಾರೆ.
ಇಂದು ಅಮಿತ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಜನಪ್ರಿಯರಾಗಿದ್ದಾರೆ. ಅವರಿಗೆ ನಲವತ್ತು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ. ಫಿಲ್ಮಿ ಶೈಲಿಯ ಆಲ್ಬಂಗಳನ್ನು ತಯಾರಿಸುವ ನಿರ್ಮಾಪಕರು ಮತ್ತು ಕ್ಯಾಂಡಿಡ್ ಫೋಟೋಗ್ರಾಫರ್‌ಗಳು ಅಮಿತ್ ಅವರ ಹಾರ್ಲೆಯನ್ನು ಬಳಸಿಕೊಂಡು ವಿಡಿಯೋ ನಿರ್ಮಾಣಕ್ಕಾಗಿ ಕೇಳುತ್ತಿದ್ದಾರೆ.
ಅಮಿತ್ ಭದನಾ ಅವರು ಹಾಲು ಉದ್ಯಮ ಶುರು ಮಾಡುವ ಮೊದಲು ಬ್ಯಾಂಕ್ ಉದ್ಯೋಗಿಯಾಗಿದ್ದರು. ಹಾಲಿನ ಉದ್ಯಮ ಶುರು ಮಾಡುವ ಸಲುವಾಗಿ ಉತ್ತಮ ಸಂಬಳ ತರುತ್ತಿದ್ದ ಬ್ಯಾಂಕ್ ಉದ್ಯೋಗವನ್ನು ಅವರು ತೊರೆದರು. ಹಾರ್ಲೆ ಡೇವಿಡ್ಸನ್ ಬೈಕ್ ಮೇಲಿದ್ದ ಪ್ರೀತಿ ಹಾಗೂ ಇವರ ಒಬ್ಬ ವಾಣಿಜ್ಯೋದ್ಯಮಿ ಆಗುವ ಕನಸು ಇವರ ಕುಟುಂಬದವರಿಗೆ ಇಷ್ಟವಿರಲಿಲ್ಲ. ಪ್ರಾರಂಭದಲ್ಲಿ ನಾನು ಡೈರಿ ವ್ಯವಹಾರದಲ್ಲಿ ತೊಡಗುವುದನ್ನು ವಿರೋಧಿಸಿದ್ದ ಕುಟುಂಬದ ಸದಸ್ಯರ ಮನಸ್ಸನ್ನು ಕ್ರಮೇಣ ನಾನೇ ಪರಿವರ್ತಿಸಿದೆ. ನಂತರದಲ್ಲಿ ಅವರೇ ನನ್ನ ಜೊತೆ ಬಂದು ನನ್ನ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತರು ಎನ್ನುತ್ತಾರೆ ಡೈರಿ ಉದ್ಯಮಿ ಅಮಿತ್ ಭದನಾ.
ನಾನು ಮೊದಲು ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದೆ. ಆದರೆ, ನನಗೆ ಕಚೇರಿಗೆ ಹೋಗಿ ಇನ್ನೊಬ್ಬರ ಅಡಿ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಅದೇ ಕುರ್ಚಿಯಲ್ಲಿ ನಿತ್ಯ ಕುಳಿತುಕೊಳ್ಳುವುದು, ಕಂಪ್ಯೂಟರ್ ಒತ್ತುವುದನ್ನು ನಾನು ದ್ವೇಷಿಸುತ್ತೇನೆ. ಹಾಗಾಗಿ ನಾನು ಬೇರೆ ಏನಾದರೂ ಮಾಡಬೇಕು ಎಂದು ಯಾವಾಗಲೂ ಅಂದುಕೊಳ್ಳುತ್ತಿದ್ದೆ. ನಂತರ ಡೈರಿ ಉದ್ಯಮ ಪ್ರಾರಂಭಿಸುವ ಆಲೋಚನೆ ನನಗೆ ಬಂತು. ಆ ಐಡಿಯಾ ಕ್ಲಿಕ್ ಆಯ್ತು. ಈ ನನಗೆ ಈ ಉದ್ಯಮ ಲಾಭವನ್ನು ತಂದು ಕೊಡುತ್ತಿದೆ.
ರಾತ್ರೋರಾತ್ರಿ ಸ್ಟಾರ್ ಆಗ್ಬಿಟ್ಟೆ: ತನ್ನ ಸಾಮಾಜಿಕ ಮಾಧ್ಯಮ ಖ್ಯಾತಿಯ ಕುರಿತು ಮಾತನಾಡಿರುವ ಅಮಿತ್, 'ಹಾರ್ಲೆಯಲ್ಲಿ ಹಾಲಿನ ಕ್ಯಾನ್‌ಗಳನ್ನು ಲೋಡ್ ಮಾಡುವ ನನ್ನ ಚಿತ್ರಗಳನ್ನು ನಾನು ಏಕೆ ಪೋಸ್ಟ್ ಮಾಡಬಾರದು ಎಂದು ನನಗೆ ಅನಿಸಿತು. ನಾನು ಹಾರ್ಲೆ ಬೈಕ್‌ನಲ್ಲಿ ಹಾಲು ವಿತರಿಸುತ್ತಿರುವ ವಿಡಿಯೋ, ಫೋಟೋ ಕ್ಲಿಕ್ ಮಾಡಿಸಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದೇನೆ. ಇದೀಗ ನಾನು ಹಾಕಿರುವ ಫೋಟೋವನ್ನು ನಲವತ್ತು ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿರುವುದನ್ನು ಕಂಡು ನನಗೇನೆ ಆಶ್ಚರ್ಯವಾಗಿದೆ. ನಾನು ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟೆ' ಎಂದು ನಗುತ್ತಾರೆ ಯಶಸ್ವಿ ಉದ್ಯಮಿ.
ಹಾರ್ಲೆ ಡೇವಿಡ್ಸನ್ ಏಕೆ?: ಹಾರ್ಲೆ ಬೈಕ್ ಓಡಿಸಬೇಕು ಎನ್ನುವುದು ನನ್ನ ಪ್ಯಾಷನ್. ಹಾರ್ಲೆ ಡೇವಿಡ್ಸನ್ ಬೈಕ್ನ ಬೆಲೆ ಭಾರತದಲ್ಲಿ 11.99 ಲಕ್ಷದಿಂದ ಪ್ರಾರಂಭವಾಗುತ್ತದೆ. ಹಾರ್ಲೆ ಡೇವಿಡ್ಸನ್ ಐರನ್ 883 ಇದುವೇ ಭಾರತದಲ್ಲಿ ಲಭ್ಯವಿರುವಂತಹ ಅತ್ಯಂತ ಕಡಿಮೆ ಬೆಲೆಯ ಮಾಡೆಲ್. ಇದೇ ಬೈಕ್ ಅನ್ನು ಯಾಕೆ ಖರೀದಿಸಿದೆ ಎಂದರೆ ಒಂದು ನನಗೆ ಹಾರ್ಲೆ ಡೇವಿಡ್ಸನ್ ಬೈಕ್ ಮೇಲಿದ್ದ ವ್ಯಾಮೋಹ ಇನ್ನೊಂದು ಹಾಲಿನ ಕಂಟೈನರ್ಗಳನ್ನು ಈ ಬೈಕ್‌ನಲ್ಲಿ ಸಂಪೂರ್ಣವಾಗಿ ಹೊಂದಿಕೊಳ್ಳುವಂತೆ ಇಡಬಹುದಾಗಿತ್ತು.
ಅವುಗಳನ್ನು ಈ ಬೈಕ್‌ನಲ್ಲಿ ಸಾಗಿಸುವುದು ತುಂಬಾ ಅನುಕೂಲಕರವಾಗಿತ್ತು. ಈ ಡ್ಯುಯಲ್ ಉದ್ದೇಶವನ್ನು ನನ್ನ ಹಾರ್ಲೆ ಡೇವಿಡ್ಸನ್ ಬೈಕ್ ಪೂರೈಸಿದೆ. ಹಾರ್ಲೆ ಡೇವಿಡ್ಸನ್ ಸವಾರಿ ಮಾಡುವ ಆಸೆ ಮತ್ತು ಡೈರಿ ವ್ಯಾಪಾರ ಮಾಡುವ ಕನಸಿಗೆ ಬೈಕ್ ಸಹಾಯ ಮಾಡಿದೆ ಎಂದು ಹೇಳುತ್ತಾರೆ ಅಮಿತ್ ಭದನಾ.
ಇದನ್ನೂ ಓದಿ: ಯೂಟ್ಯೂಬ್ ಆರಂಭಿಸಿ ಲಕ್ಷ ಲಕ್ಷ ಸಂಪಾದನೆ:50ಲಕ್ಷದ ಆಡಿ ಕಾರು ಖರೀದಿಸಿ ಯುವಕರಿಗೆ ಸ್ಪೂರ್ತಿ