ಅಹಮದಾಬಾದ್ (ಗುಜರಾತ್): ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾರ್ದಿಕ್ ಪಟೇಲ್ ಪಕ್ಷವು 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಗುಜರಾತ್ನಲ್ಲಿ ಬಿಜೆಪಿ ನಿಸ್ಸಂದೇಹವಾಗಿ ಸತತ ಏಳನೇ ಬಾರಿಗೆ ಸರ್ಕಾರ ರಚಿಸುತ್ತದೆ ಎಂದು ಹೇಳಿದ್ದಾರೆ.
ಮತ ಎಣಿಕೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಪಟೇಲ್, "ಗುಜರಾತ್‌ನ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಪಕ್ಷ ಇಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ನಾವು 135 ರಿಂದ 145 ಸ್ಥಾನಗಳನ್ನು ಪಡೆಯುತ್ತೇವೆ. ಖಂಡಿತವಾಗಿಯೂ ಸರ್ಕಾರ ರಚಿಸಲಿದ್ದೇವೆ. ನಿಮಗೆ ಏನಾದರೂ ಅನುಮಾನವಿದೆಯೇ?" ಬಿಜೆಪಿ ಆಡಳಿತದಲ್ಲಿ ಜನರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಿದ್ದರಿಂದ ಜನರು ಬಿಜೆಪಿಯನ್ನು ನಂಬಿದ್ದಾರೆ ಎಂದು ಪಟೇಲ್ ಹೇಳಿದರು.
ಕೆಲಸದ ಆಧಾರದ ಮೇಲೆ ಸರ್ಕಾರ ರಚನೆಯಾಗುತ್ತದೆ. ಕಳೆದ 20 ವರ್ಷಗಳಲ್ಲಿ ಇಲ್ಲಿ ಯಾವುದೇ ಗಲಭೆ,ಭಯೋತ್ಪಾದಕ ದಾಳಿಗಳು ನಡೆದಿಲ್ಲ. ಬಿಜೆಪಿ ಜನರ ನಿರೀಕ್ಷೆಗಳನ್ನು ಈಡೇರಿಸಿದೆ ಎಂಬುದು ಅವರಿಗೆ ತಿಳಿದಿದೆ. ಬಿಜೆಪಿ ಅಡಿಯಲ್ಲಿ ನಮ್ಮ ಭವಿಷ್ಯ ಸುರಕ್ಷಿತವಾಗಿರುತ್ತದೆ ಎಂದು ಜನ ಕಮಲಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ ಎಂದರು.
ಇದನ್ನೂ ಓದಿ: ಗುಜರಾತ್ ಎಲೆಕ್ಷನ್ನಲ್ಲಿ ಮುಸ್ಲಿಮರ ಪ್ರಭಾವ?.. ಶಾಸನ ಸಭೆಯಲ್ಲಿ ಎಂ ಫ್ಯಾಕ್ಟರ್ ಏನು?
ಕಾಂಗ್ರೆಸ್ ಗುಜರಾತಿನ ಅಭಿಮಾನದ ವಿರುದ್ಧ ಕೆಲಸ ಮಾಡಿದೆ. ಅವರು ಗುಜರಾತಿಗಳ ವಿರುದ್ಧ ಉದ್ದೇಶಿತ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದಾಗಿ ಜನರು ಕಾಂಗ್ರೆಸ್‌ನಿಂದ ದೂರ ಸರಿಯುತ್ತಿದ್ದಾರೆ. ದೂರದೃಷ್ಟಿ ಇಲ್ಲದ ನಾಯಕರು ಯಶಸ್ವಿಯಾಗಲು ಮತ್ತು ದೇಶವನ್ನು ಮುಂದೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಪಟೇಲ್ ರಾಹುಲ್ ಗಾಂಧಿಯ ವಿರುದ್ಧ ಕಿಡಿಕಾರಿದರು.
ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಹಾರ್ದಿಕ್ ಪಟೇಲ್ ವಿರಾಮಗಾಮ್‌ನಿಂದ ಸ್ಪರ್ಧಿಸಿದ್ದರು. ಈ ವರ್ಷದ ಜೂನ್‌ನಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಅವರು, ಕಾಂಗ್ರೆಸ್‌ನ ಲಾಖಾ ಭಾರವಾಡ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಅಮರಸಿಂಹ ಠಾಕೋರ್ ವಿರುದ್ಧ ಸ್ಪರ್ಧಿಸಿದ್ದಾರೆ.