ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳು ಕಳೆದಿವೆ. ಆದರೆ, ರಾಜ್ಯಕ್ಕೆ ಬಂದಿರುವ ಮಾದರಿ ಉದ್ಯಮಗಳು ಮಾತ್ರ ಬೆರಳಿನಲ್ಲಿ ಎಣಿಕೆಯಷ್ಟು ಮಾತ್ರ. ಇದೇ ವೇಳೆ, ಈ ಮೂರೂವರೆ ವರ್ಷಗಳಲ್ಲಿ ಹಲವು ಹೊಸ ಕೈಗಾರಿಕೆಗಳು ಕೈ ತಪ್ಪಿವೆ.
ಎಲ್ಲ ರಾಜ್ಯಗಳು ಕೈಗಾರಿಕೆಗಳು ಮತ್ತು ಹೂಡಿಕೆಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತವೆ. ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಭೂ ಹಂಚಿಕೆ ಮತ್ತು ಒಪ್ಪಂದಗಳನ್ನು ಮಾಡಿಕೊಂಡಿರುವ ಕೆಲವು ಕೈಗಾರಿಕೆಗಳನ್ನು ಸರ್ಕಾರವೇ ಹೊರಕ್ಕೆ ಹಾಕುತ್ತಿದೆ. ಆಡಳಿತ ಪಕ್ಷದ ಪ್ರತಿನಿಧಿಗಳ ಬೇಡಿಕೆಗೆ ಹೆದರಿ ಕೆಲವು ಕೈಗಾರಿಕೆಗಳು ತಮ್ಮ ಅಸ್ತಿತ್ವಕ್ಕಾಗಿ ನೆರೆಯ ರಾಜ್ಯಗಳಿಗೆ ತೆರಳುತ್ತಿವೆ. ಆಂಧ್ರದಿಂದ ಹೊರ ಹೋದ ಕೈಗಾರಿಕೆಗಳ ಪಟ್ಟಿ ದೊಡ್ಡದಿದೆ.
ಆಂಧ್ರದಿಂದ ತಮಿಳುನಾಡಿಗೆ ಲುಲು ಶಿಫ್ಟ್: ಹಿಂದಿನ ಸರ್ಕಾರದ ಅವಧಿಯಲ್ಲಿ ಯುಎಇಯ ಲುಲು ಕಂಪನಿಯು ವಿಶಾಖಪಟ್ಟಣಂನಲ್ಲಿ 7,000 ಜನರಿಗೆ ಉದ್ಯೋಗ ನೀಡಲು 2,200 ಕೋಟಿಗಳ ಹೂಡಿಕೆಯೊಂದಿಗೆ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ ಮತ್ತು ಮೆಗಾ ಶಾಪಿಂಗ್ ಮಾಲ್ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಬೀಚ್ ರಸ್ತೆಯಲ್ಲಿ ಸರ್ಕಾರವು 13.83 ಎಕರೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿ, ಅಡಿಗಲ್ಲು ಹಾಕಲಾಯಿತ್ತು.
ಆದರೆ, ಈ ಬೃಹತ್ ಯೋಜನೆ ಆರಂಭವಾಗುತ್ತಿದ್ದಂತೆಯೇ ಅಧಿಕಾರಕ್ಕೆ ಬಂದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ಭೂ ಮಂಜೂರಾತಿ ರದ್ದುಗೊಳಿಸಿತು. ಅಲ್ಲದೇ, ಸರ್ಕಾರದ ಕಿರುಕುಳದ ಆರೋಪದ ಮೇಲೆ ಕಂಪನಿಯು ಆಂಧ್ರ ಪ್ರದೇಶದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವುದಿಲ್ಲ ಎಂದು ಘೋಷಿಸಿದೆ.
ಜೊತೆಗೆ ಈಗಾಗಲೇ ಈಗಾಗಲೇ ವಿಶಾಖಪಟ್ಟಣಂನಲ್ಲಿ ಪೂರ್ಣಗೊಳ್ಳಬೇಕಿದ್ದ ಯೋಜನೆಯನ್ನು ಲುಲು ಕಂಪನಿ ತಮಿಳುನಾಡಿಗೆ ಸ್ಥಳಾಂತರಿಸಿದೆ. ಇದೇ ವರ್ಷದ ಮಾರ್ಚ್ 28ರಂದು ಲುಲು ಗ್ರೂಪ್ 3,500 ಕೋಟಿ ಹೂಡಿಕೆ ಮಾಡಲು ತಮಿಳುನಾಡು ಸರ್ಕಾರದೊಂದಿಗೆ ಎಂಒಯುಗೆ ಸಹಿ ಹಾಕಿದೆ.
ಫ್ರಾಂಕ್ಲಿನ್ ಟೆಂಪಲ್ಟನ್ ಕೂಡ ಹೊರಗೆ: ಫಾರ್ಚೂನ್ 500 ಕಂಪನಿಗಳಲ್ಲಿ ಒಂದಾದ ಫ್ರಾಂಕ್ಲಿನ್ ಟೆಂಪಲ್ಟನ್ ಹಿಂದಿನ ಸರ್ಕಾರದ ಅವಧಿಯಲ್ಲಿ ವಿಶಾಖಪಟ್ಟಣದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಕ್ಯಾಂಪಸ್ ಸ್ಥಾಪಿಸಲು ಮುಂದೆ ಬಂದಿತ್ತು. 2,500 ಉನ್ನತ ಮಟ್ಟದ ಐಟಿ ಉದ್ಯೋಗಗಳನ್ನು ಒದಗಿಸುವುದಾಗಿ ಮತ್ತು 70 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಕಂಪನಿ ಹೇಳಿತ್ತು.
ಆ ಸಂಸ್ಥೆಗೆ ಸರ್ಕಾರ 40 ಎಕರೆ ಮಂಜೂರು ಮಾಡಿ, ಹಲವು ಪ್ರೋತ್ಸಾಹಧನಗಳನ್ನೂ ಸಹ ಘೋಷಿಸಲಾಗಿತ್ತು. ಆದರೆ, ವೈಎಸ್‌ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಈ ಸಂಸ್ಥೆಯು ಯೋಜನೆಯನ್ನು ಪ್ರಾರಂಭಿಸಲು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸರ್ಕಾರದ ಧೋರಣೆಯನ್ನು ತಾಳೆದ ಸಂಸ್ಥೆಯ ಆಂಧ್ರದಿಂದ ಹೊರಟು ಹೋಗಿದೆ.
ನಮ್ಮ ಹಣ ಕೊಡಿ ಎಂದು ಕೇಳಿದ ಜಾಕಿ: ಈ ಹಿಂದಿನ ಸರ್ಕಾರವು ಅನಂತಪುರ ಸಮೀಪದ ರಾಪ್ತಾಡು ಎಂಬಲ್ಲಿ ಕಾರ್ಖಾನೆ ಸ್ಥಾಪಿಸಲು ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ (ಜಾಕಿ ಉಡುಪು ತಯಾರಕ ಕಂಪನಿ)ಗೆ 27 ಎಕರೆ ಮಂಜೂರು ಮಾಡಿತ್ತು. 129 ಕೋಟಿ ಹೂಡಿಕೆಯೊಂದಿಗೆ ಕಂಪನಿಯು ವಾರ್ಷಿಕವಾಗಿ 32.4 ಮಿಲಿಯನ್ ಉಡುಪುಗಳನ್ನು ತಯಾರಿಸಲು ಕಾರ್ಖಾನೆ ಮತ್ತು ಗೋದಾಮನ್ನು ಸ್ಥಾಪಿಸಲು ಯೋಜಿಸಿತ್ತು.
ಇದರಿಂದ 6,420 ಮಂದಿಗೆ ನೇರ ಉದ್ಯೋಗ ದೊರೆಯಲಿದೆ ಎಂದು ನಿರೀಕ್ಷೆ ಸಹ ಇತ್ತು. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆ ಪಕ್ಷದ ಸಾರ್ವಜನಿಕ ಪ್ರತಿನಿಧಿಯೊಬ್ಬರು ಆ ಕಂಪನಿಗೆ ದೇಣಿಗೆ ನೀಡುವಂತೆ ಬೆದರಿಕೆ ಹಾಕಲು ಆರಂಭಿಸಿದರು. ಜೊತೆಗೆ ನಾನು ಹೇಳಿದವರಿಗೆ ಉಪಗುತ್ತಿಗೆ ನೀಡಬೇಕು ಮತ್ತು ಹೇಳಿದಂತೆ ಕೆಲಸ ನೀಡಬೇಕು ಎಂದು ಎಚ್ಚರಿಸಿದರು.
ಹಾಗಾಗಿ ನಿಮ್ಮ ಜಮೀನು ವಾಪಸ್ ಪಡೆದು ನಮ್ಮ ಹಣವನ್ನು ಕೊಡಿ ಎಂದು ಸಂಸ್ಥೆಯು ಆಂಧ್ರ ಪ್ರದೇಶದ ಸರ್ಕಾರಕ್ಕೆ ಪತ್ರ ಬರೆದಿದೆ. ಇಷ್ಟೇ ಅಲ್ಲ, ಪಕ್ಕದ ತೆಲಂಗಾಣದಲ್ಲಿ ತನ್ನ ಎರಡು ಘಟಕಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಟ್ರೈಟಾನ್ ಸಹ ಸ್ಥಳಾಂತರ: ಸೆಪ್ಟೆಂಬರ್ 2018ರಲ್ಲಿ ಅಮೆರಿಕನ್ ಕಂಪನಿ ಟ್ರೈಟಾನ್ ವಿಶಾಖಪಟ್ಟಣಂ ಮತ್ತು ಚಿತ್ತೂರಿನಲ್ಲಿ 727 ಕೋಟಿ ಹೂಡಿಕೆಯೊಂದಿಗೆ ಸೌರ ಬ್ಯಾಟರಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು.
ಇದು ಮುದ್ರಿಸಬಹುದಾದ ಸೌರ ಕೋಶಗಳು, ಮುದ್ರಿತ ಬೆಳಕು ಮತ್ತು ಮುದ್ರಿತ ಬ್ಯಾಟರಿಗಳ ಪ್ರಮುಖ ತಯಾರಕ ಕಂಪನಿಯಾಗಿತ್ತು. ವೈಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಆ ಯೋಜನೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಕಂಪನಿಯು ಆಂಧ್ರಕ್ಕೆ ವಿದಾಯ ಹೇಳಿ, ತೆಲಂಗಾಣದತ್ತ ಮುಖ ಮಾಡಿದೆ.
ರಿಲಯನ್ಸ್ ಜಮೀನು ವಾಪಸ್: ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ರಿಲಯನ್ಸ್ ಕಂಪನಿ ತಿರುಪತಿ ಬಳಿ 15 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕಾ ಘಟಕ ಸ್ಥಾಪಿಸಲು ಮುಂದೆ ಬಂದಿತ್ತು. ಸರ್ಕಾರ 136 ಎಕರೆ ಮಂಜೂರು ಮಾಡಲು ಮಾಡಿತ್ತು.
ವೈಎಸ್‌ಆರ್‌ಸಿಪಿ ಅಧಿಕಾರಕ್ಕೆ ಬಂದ ನಂತರ 75 ಎಕರೆಯನ್ನು ರಿಲಯನ್ಸ್‌ಗೆ ಹಸ್ತಾಂತರಿಸಿತ್ತು. ಆ ಪೈಕಿ 15 ಮಂದಿ ಭೂಮಾಲೀಕರು ವಿವಿಧ ಕಾರಣಗಳಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಇದರಿಂದ 50 ಎಕರೆ ಜಮೀನು ವಿವಾದಕ್ಕೆ ಸಿಲುಕಿದೆ. ಪರ್ಯಾಯವಾಗಿ, ವಡಮಲಪೇಟ್ ಮಂಡಲದ ಪಾಡಿರೇಡು ಅರಣ್ಯದಲ್ಲಿ ಯಾವುದೇ ವಿವಾದಗಳಿಲ್ಲದ ಭೂಮಿಯನ್ನು ನೀಡುವ ಎಪಿಐಐಸಿಯ ಪ್ರಸ್ತಾಪವನ್ನು ರಿಲಯನ್ಸ್ ಒಪ್ಪಲಿಲ್ಲ. ತಮಗೆ ಮಂಜೂರಾಗಿದ್ದ ಜಮೀನುಗಳನ್ನು ಎಪಿಐಐಸಿಗೆ ರಿಲಯನ್ಸ್ ಹಿಂದಿರುಗಿಸಿದೆ.
24 ಸಾವಿರ ಕೋಟಿ ಕಾಗದ ಉದ್ಯಮ ಹಿಂದಕ್ಕೆ: ಏಷ್ಯನ್ ಪಲ್ಪ್ ಆ್ಯಂಡ್ ಪೇಪರ್ ಮಿಲ್ಸ್ ಕಂಪನಿಯು ಪ್ರಕಾಶಂ ಜಿಲ್ಲೆಯಲ್ಲಿ 24 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕಾಗದ ಕೈಗಾರಿಕೆ ಸ್ಥಾಪಿಸಲು ಹಿಂದಿನ ಸರ್ಕಾರದಲ್ಲಿ ಮುಂದೆ ಬಂದಿತ್ತು. ವೈಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿದ ಕಂಪನಿಯ ತನ್ನ ಯೋಜನೆಯನ್ನು ಕೈ ಬಿಟ್ಟಿದೆ.
ಇನ್ನೂ ಅನೇಕ ಕಂಪನಿಗಳು ವಾಪಸ್: ಅಲ್ಲದೇ, ಹಿಂದಿನ ಸರ್ಕಾರದ ಅವಧಿಯಲ್ಲಿ ಚಿತ್ತೂರು ಜಿಲ್ಲೆಯಲ್ಲಿ 300 ಕೋಟಿ ರೂ.ಗಳ ವೆಚ್ಚದಲ್ಲಿ ಬೆಸ್ಟ್ ಬ್ಯಾಟರಿ ಕಂಪನಿ ಘಟಕ ಸ್ಥಾಪಿಸಲು ಸಿದ್ಧತೆ ನಡೆಸಿತ್ತು. ಆದರೆ, ಅದು ಈಗ ತೆಲಂಗಾಣಕ್ಕೆ ಹೋಗಿದೆ. ಶ್ರೀಸತ್ಯಸಾಯಿ ಜಿಲ್ಲೆಯ ಪೆನುಕೊಂಡದಲ್ಲಿ 10,500 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಕಿಯಾ ಕಾರು ತಯಾರಿಕಾ ಉದ್ಯಮ ಸ್ಥಾಪಿಸಲು ಮುಂದೆ ಬಂದಿತ್ತು.
ಐದು ಸಾವಿರ ಕೋಟಿಗಳ ಹೂಡಿಕೆಯೊಂದಿಗೆ ಅಂಗಸಂಸ್ಥೆ ಘಟಕಗಳನ್ನು ಸ್ಥಾಪಿಸುವುದಾಗಿ ಕಿಯಾ ಈ ಹಿಂದೆ ಘೋಷಿಸಿತ್ತು. ಆದರೆ, ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸ್ಥಳೀಯ ಸಂಸದರ ಬೆದರಿಕೆ ಮತ್ತು ಕಹಿ ಅನುಭವಗಳಿಂದ ಅಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಿಲ್ಲ.
70ರಿಂದ 3 ಸಾವಿರ ಕೋಟಿಗೆ ಅದಾನಿ ಹೂಡಿಕೆ ಇಳಿಕೆ: ಜಗನ್ ಸರ್ಕಾರವು ಈಗ ಗುಜರಾತ್‌ನ ಪ್ರಮುಖ ವ್ಯಾಪಾರ ಕಂಪನಿಯಾದ ಅದಾನಿ ಗ್ರೂಪ್‌ನೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದೆ. ಆದರೆ, ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದ ಮೇಲೆ ಅದಾನಿಗೆ ಅಷ್ಟು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹಿಂದಿನ ಸರ್ಕಾರದಲ್ಲಿ ಅದಾನಿ ವಿಶಾಖಪಟ್ಟಣದಲ್ಲಿ 20 ವರ್ಷಗಳಲ್ಲಿ 70 ಸಾವಿರ ಕೋಟಿ ಹೂಡಿಕೆಯೊಂದಿಗೆ ಡೇಟಾ ಸೆಂಟರ್ ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು.
ಹಿಂದಿನ ಸರ್ಕಾರ ಅದಾನಿಗೆ ವಿಶಾಖಪಟ್ಟಣದಲ್ಲಿ ಮೂರು ಸ್ಥಳಗಳಲ್ಲಿ 400 ಎಕರೆ ಮಂಜೂರು ಮಾಡಿತ್ತು. ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ 20 ವರ್ಷಗಳಲ್ಲಿ ಬಂಡವಾಳ ಹೂಡಿದರೆ, ಈಗ ಭೂಮಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅದರೊಂದಿಗೆ ಅದಾನಿ ಕಂಪನಿ ತನ್ನ 70 ಸಾವಿರ ಕೋಟಿಯ ಹೂಡಿಕೆ ಪ್ರಸ್ತಾವನೆಯನ್ನು ಹಿಂತೆಗೆದುಕೊಂಡು 3 ಸಾವಿರ ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದೆ. ಆದರೆ, ಇದು ಇನ್ನೂ ಕಾಗದದ ಮೇಲೆಯೇ ಇದೆ.
ಇದನ್ನೂ ಓದಿ: ದಿವಾಳಿತನದ ಪ್ರಕ್ರಿಯೆಯಲ್ಲಿ ಸಾವಿರಾರು ಕೋಟಿ ಮೌಲ್ಯದ ಭೂಮಿ ಆಂಧ್ರ ಸಿಎಂ ಮತ್ತು ಕಂಪನಿ ಪಾಲು