ಸೂರತ್(ಗುಜರಾತ್): ಅಮೃತ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಆಗಸ್ಟ್ 11ರಿಂದ 17ರವರೆಗೆ "ಹರ್ ಘರ್ ತಿರಂಗಾ" ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಅಭಿಯಾನಕ್ಕಾಗಿ ದೇಶದ ಜವಳಿ ನಗರ ಎಂಬ ಖ್ಯಾತಿ ಪಡೆದಿರುವ ಗುಜರಾತ್ನ ಸೂರತ್ನಲ್ಲಿ ಬರೋಬ್ಬರಿ 10 ಕೋಟಿ ತಿರಂಗಾ ಸಿದ್ಧಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ.
2022ರ ಜುಲೈ 6ರೊಳಗೆ 100 ಮಿಲಿಯನ್ ತ್ರಿವರ್ಣ ಧ್ವಜ ಸಿದ್ಧಪಡಿಸುವ ಗುರಿ ಇದೆ ಎಂದು ಅಲ್ಲಿನ ಕೈಗಾರಿಕೋದ್ಯಮಿಗಳು ಮಾತನಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ತ್ರಿವರ್ಣ ಧ್ವಜ ತಯಾರಿಸುವ ಉದ್ದೇಶದಿಂದ ಭಿವಂಡಿ ರೋಟಾದಿಂದ ಬಟ್ಟೆ ಸಹ ಆರ್ಡರ್ ಮಾಡಲಾಗಿದೆ. ಈಗಾಗಲೇ ತ್ರಿವರ್ಣ ಧ್ವಜ ಸಿದ್ಧಪಡಿಸುವ ಕೆಲಸ ಆರಂಭಗೊಂಡಿದೆ ಎಂಬ ಮಾಹಿತಿ ನೀಡಿದರು.
ಏನಿದು 'ಹರ್ ಘರ್ ತಿರಂಗಾ' ಅಭಿಯಾನ: "ಹರ್ ಘರ್ ತಿರಂಗಾ" ಅಭಿಯಾನದಡಿ ದೇಶದ ಮನೆಮನೆಯಲ್ಲೂ ರಾಷ್ಟ್ರಧ್ಜಜ ಹಾರಿಸಿ ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಕರೆ ಕೊಡಲಾಗಿದೆ. ಈ ಮೂಲಕ ದೇಶಾದ್ಯಂತ ಒಂದು ವಾರದೊಳಗೆ 72 ಕೋಟಿ ತ್ರಿವರ್ಣ ಧ್ವಜ ಹಾರಿಸುವ ಗುರಿ ಇಟ್ಟುಕೊಳ್ಳಲಾಗಿದ್ದು,ಇದಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ತ್ರಿವರ್ಣ ಧ್ವಜ ತಯಾರಿಸಲು ದೇಶದಲ್ಲಿರುವ ಪ್ರತಿವೊಂದು ಜವಳಿ ಉದ್ಯಮ ಸಂಪರ್ಕಿಸಲಾಗಿದ್ದು, ದೇಶದ ಮೂಲೆ ಮೂಲೆಗಳಿಗೆ ತ್ರಿವರ್ಣ ಧ್ವಜ ಕಳುಹಿಸುವ ಇರಾದೆ ಇಟ್ಟುಕೊಳ್ಳಲಾಗಿದೆ.
ಇದನ್ನೂ ಓದಿರಿ: LPG ಬೆಲೆ ಏರಿಕೆ: ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ
ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್ ಜೊತೆ ಮಾತನಾಡಿರುವ ದಕ್ಷಣ ಗುಜರಾತ್ ಪ್ರೊಸೆಸಿಂಗ್ ಹೌಸ್ ಯುನಿಟ್ ಅಸೋಸಿಯೇಷನ್ನ ಅಧ್ಯಕ್ಷ ಜೀತು ವಖಾರಿಯಾ, ತ್ರಿವರ್ಣ ಧ್ವಜ ತಯಾರಿಸಲು ಕೇಂದ್ರ ಸರ್ಕಾರ ಈಗಾಗಲೇ ನಮ್ಮನ್ನು ಸಂಪರ್ಕಿಸಿದೆ. ಹೀಗಾಗಿ, ಧ್ವಜಗಳ ತಯಾರಿಕೆ ಕಾರ್ಯ ಆರಂಭಗೊಂಡಿದ್ದು, ಸುಮಾರು 10 ಕೋಟಿ ತ್ರಿವರ್ಣ ಧ್ವಜ ತಯಾರಿಸುವ ಇರಾದೆ ಇಟ್ಟುಕೊಳ್ಳಲಾಗಿದೆ. ನಮ್ಮಲ್ಲಿ ತಯಾರಿಸಿರುವ ತ್ರಿವರ್ಣ ಧ್ವಜ ದೆಹಲಿಗೆ ರವಾನೆಯಾಗಲಿವೆ ಎಂದರು.