ವಿಶ್ವಸಂಸ್ಥೆ: ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದುಕೊಂಡಿದ್ದ ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಮತ್ತು ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನದ ವಶದಲ್ಲಿದ್ದಾನೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಗಳಲ್ಲಿ 78 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
2008 ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ನಿರ್ಬಂಧಕ್ಕೊಳಗಾಗಿರುವ ಜಾಗತಿಕ ಭಯೋತ್ಪಾದಕ ಸಯೀದ್, ಪಾಕಿಸ್ತಾನ ಸರ್ಕಾರದ ವಶದಲ್ಲಿದ್ದು, ಹಲವು ಪ್ರಕರಣಗಳಲ್ಲಿ 78 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. 2020 ರಿಂದ ಆತ ಪಾಕ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ ಎಂದು ಮಾಹಿತಿ ನೀಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವೆಂಟ್ ಮತ್ತು ಅಲ್-ಖೈದಾ ಮೇಲಿನ ನಿರ್ಬಂಧಗಳಾದ ಸ್ವತ್ತುಗಳು ಜಪ್ತಿ, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಟ್ಟಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಯಮಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡಿದೆ. ಅದರಲ್ಲಿ ಹಫೀಜ್ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಬಗ್ಗೆ ವಿವರಿಸಿದೆ.
ಇದರ ಪ್ರಕಾರ, ಲಷ್ಕರ್ ಎ ತೊಯ್ಬಾದ (ಎಲ್‌ಇಟಿ) ಸ್ಥಾಪಕ ಸದಸ್ಯ ಮತ್ತು ಸಯೀದ್‌ನ ಸಹಚರ ಅಬ್ದುಲ್ ಸಲಾಮ್ ಭುಟ್ಟವಿ ಮೃತಪಟ್ಟಿದ್ದಾರೆ ಎಂದು ದೃಢೀಕರಿಸಲಾಗಿದೆ. 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಎಲ್ಇಟಿ ದಾಳಿಕೋರರಿಗೆ ತರಬೇತಿ ನೀಡಿದ್ದ ಮತ್ತು ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದ್ದ ಭುಟ್ಟವಿ, ಶಿಕ್ಷೆಯನ್ನು ಅನುಭವಿಸುತ್ತಿರುವಾಗ ಕಳೆದ ವರ್ಷ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಜೈಲಿನಲ್ಲಿ ನಿಧನ ಹೊಂದಿದ್ದಾನೆ ಎಂದು ಯುಎನ್(UN) ತಿಳಿಸಿದೆ.
ಅಲ್ಖೈದಾ ಜೊತೆಗೆ ಗುರುತಿಸಿಕೊಂಡಿದ್ದ ಸಯೀದ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲಾಗಿದೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ಈತ ಬೇಕಾಗಿದ್ದಾನೆ. ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಫೀಜ್ನನ್ನು ಹಸ್ತಾಂತರಿಸುವಂತೆ ಭಾರತ ಕಳೆದ ಡಿಸೆಂಬರ್‌ನಲ್ಲಿ ಪಾಕಿಸ್ತಾನವನ್ನು ಕೋರಿತ್ತು. ಆದರೆ, ನೆರೆರಾಷ್ಟ್ರ ಇದನ್ನು ನಿರಾಕರಿಸಿತ್ತು. ಪಾಕಿಸ್ತಾನ ಮತ್ತು ಭಾರತದ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ. ಹಫೀಜ್ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸುವುದು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿತ್ತು.
ಬಾಂಬ್ ದಾಳಿಯಲ್ಲಿ ಹಫೀಜ್ ಸಾವನ್ನಪ್ಪಿದ್ದಾನೆ ಎಂದು ಗಾಳಿ ಸುದ್ದಿಯೊಂದು ಇತ್ತೀಚಿಗೆ ಹರಿದಾಡಿತ್ತು. ಪಾಕಿಸ್ತಾನದಲ್ಲಿರುವ ಈತನ ಮೇಲೆ ನಡೆದ ನಿಗೂಢ ದಾಳಿಯಲ್ಲಿ ಸಾವಿಗೀಡಾಗಿದ್ದಾನೆ ಎಂದು ವರದಿಯಾಗಿತ್ತು. ಬಳಿಕ ಇದೆಲ್ಲ ಕೇವಲ ವದಂತಿ ಎಂಬ ಮಾಹಿತಿ ಹೊರಬಿದ್ದಿತ್ತು. (ಪಿಟಿಐ)
ಇದನ್ನೂ ಓದಿ: ಹಫೀಜ್ ಸಯೀದ್ ಹಸ್ತಾಂತರಕ್ಕೆ ಭಾರತ ಮನವಿ: ಪಾಕಿಸ್ತಾನದ ಪ್ರತಿಕ್ರಿಯೆ ಏನು?