ಭುವನೇಶ್ವರ (ಒಡಿಶಾ) : ರಾಜ್ಯದಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಸಂಗ್ರಹಿಸಲಾದ 225 ಮಾದರಿಗಳ ಪೈಕಿ 59 ಎಚ್3ಎನ್2 ಪ್ರಕರಣಗಳು ದೃಢಪಟ್ಟಿವೆ. ಭುವನೇಶ್ವರದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ (ಆರ್‌ಎಂಆರ್‌ಸಿ) ನಿರ್ದೇಶಕ ಡಾ. ಸಂಘಮಿತ್ರ ಪತಿ ಈ ಕುರಿತು ಶನಿವಾರ ಮಾಹಿತಿ ನೀಡಿದ್ದಾರೆ. ಜ್ವರ, ಕೆಮ್ಮು ಇದರ ಸಾಮಾನ್ಯ ಲಕ್ಷಣಗಳು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಎಚ್3ಎನ್2 ವೈರಸ್ ಪ್ರಕರಣಗಳ ಏರಿಕೆಯ ಮಧ್ಯೆ ಆರೋಗ್ಯ ಕಾರ್ಯದರ್ಶಿ ಸಭೆ ನಡೆಸಿ, ಎಲ್ಲ ಜಿಲ್ಲಾಡಳಿತಗಳು ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಇನ್ಪ್ಲುಯೆಂಜಾ ತರಹದ ಅನಾರೋಗ್ಯ ಮತ್ತು ತೀವ್ರ ಉಸಿರಾಟ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಮೇಲ್ವಿಚಾರಣೆಯನ್ನು ಸಮುದಾಯ ಮಟ್ಟದಲ್ಲಿ ಮಾಡುವಂತೆ ಸೂಚಿಸಿದ್ದಾರೆ.
ಮುನ್ನೆಚ್ಚರಿಕೆ ವಹಿಸಿ: ಆರೋಗ್ಯ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ, ಎಚ್1ಎನ್1 ಮತ್ತು ಎಚ್3ಎನ್2 ಇನ್ಪ್ಲುಯೆಂಜಾ ಎ ವೈರಸ್ನ ಉಪವಿಭಾಗಗಳಾಗಿವೆ. ಕಳೆದ ಡಿಸೆಂಬರ್‌ನಿಂದ ಪ್ರಸಕ್ತ ವರ್ಷದ ಮಾರ್ಚ್‌ವರೆಗೆ ಮಕ್ಕಳು ಮತ್ತು ವೃದ್ಧರಲ್ಲಿ ಇದು ಸಾಮಾನ್ಯ ಜ್ವರದಂತೆ ಕಂಡುಬಂದಿದೆ. ಇಂತಹ ಸಂದರ್ಭದಲ್ಲಿ ಕೈ ತೊಳೆಯುವುದು, ವೈಯಕ್ತಿಕ ನೈರ್ಮಲ್ಯ ಮತ್ತು ಜನಸಂದಣಿ ಸ್ಥಳಗಳಿಂದ ದೂರವಿರಬೇಕು. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಅನುಸರಿಸಿದ ಕ್ರಮಗಳನ್ನೇ ಅನುಸರಿಸಬೇಕು ಎಂದು ತಿಳಿಸಲಾಗಿದೆ.
ನಮ್ಮ 30 ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು, 23 ರಿವರ್ಸ್ ಟ್ರಾನ್ಸ್ಕ್ರಿಪ್ಷನ್-ಪಾಲಿಮರೇಸ್ ಚೈನ್ ರಿಯಾಕ್ಷನ್(ಆರ್‌ಟಿಪಿಸಿಆರ್) ಪರೀಕ್ಷೆ ನಡೆಸುವ ಲ್ಯಾಬ್‌ಗಳು ಮತ್ತು ಜಿಲ್ಲಾ ಸಾರ್ವಜನಿಕ ಆರೋಗ್ಯ ಇಲಾಖೆಯ ದಾದಿಯರು ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಈ ಮೂಲಕ ಸೋಂಕು ಪ್ರಕರಣಗಳ ಪ್ರವೃತ್ತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ನಮ್ಮ 30 ಡಿಪಿಹೆಚ್ಎಲ್‌ಗಳು ನಿಯಮಿತವಾಗಿ ಎಚ್1ಎನ್1ಗಳ ಪರೀಕ್ಷೆ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಉಲ್ಬಣ ಕಂಡುಬಂದರೆ ಪರೀಕ್ಷೆ ನಡೆಸಲು ಅಗತ್ಯ ಮೂಲಸೌಕರ್ಯ ಮತ್ತು ಲ್ಯಾಬ್ ಲಾಜಿಸ್ಟಿಕ್ಸ್ ಒದಗಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕರ್ನಾಟಕ ಮತ್ತು ಹರಿಯಾಣದಲ್ಲಿ ಇದುವರೆಗೆ ಎಚ್3ಎನ್2 ಸೋಂಕಿನಿಂದ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ. ಎಚ್3ಎನ್2 ಪ್ರಬಲ ಉಪವಿಧವಾಗಿದ್ದು ನಂತರ ಎಚ್1ಎನ್1 ಆಗಿದೆ. ಈ ಎರಡೂ ಉಪವಿಭಾಗಗಳು ಇನ್ಪ್ಲುಯೆಂಜಾ 'ಎ' ಪ್ರಕಾರಕ್ಕೆ ಸೇರಿವೆ. ಈ ಪ್ರಕರಣಗಳು ಮಾರ್ಚ್ ತಿಂಗಳ ಅಂತ್ಯದಿಂದ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಸಚಿವಾಲಯ ಶುಕ್ರವಾರ ಹೇಳಿತ್ತು.
ಕರ್ನಾಟಕದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ್ದ ಸೂಚನೆಯ ಮೇರೆಗೆ ಯಾವ ರೀತಿಯ ಮಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂಬುದರ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಜ್ಞ ವೈದ್ಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾರ್ಚ್ 6ರಂದು ಸಮಾಲೋಚನೆ ನಡೆಸಿದ್ದರು. ಸಭೆಯಲ್ಲಿ ಎಚ್3ಎನ್2 ವೈರಸ್ ಅಪಾಯಕಾರಿ ಅಲ್ಲ. ಆದರೆ, ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯ. ಗಾಬರಿಪಡುವ ಯಾವುದೇ ಸ್ಥಿತಿ ಇಲ್ಲ ಎಂದು ತಿಳಿಸಿದ್ದರು.
ಕೇಂದ್ರ ಸರ್ಕಾರ ಪ್ರತಿವಾರ ಸ್ಯಾರಿ, ILR ಹೀಗೆ.. 25 ಟೆಸ್ಟ್ ಮಾಡಲು ಸೂಚಿಸಿದೆ. 15 ವರ್ಷದ ಕೆಳಗಿನ ಮಕ್ಕಳಿಗೆ ಈ ವೇರಿಯೆಂಟ್‌ನಿಂದ ಅಪಾಯ ಇದೆ. 65 ವರ್ಷದ ಮೇಲ್ಪಟ್ಟ ವಯೋವೃದ್ದರು, ಗರ್ಭಿಣಿಯರಿಗೂ ಅಪಾಯ ಇದೆ. ಶುಚಿತ್ವಕ್ಕೆ ಹೆಚ್ಚು ಮಹತ್ವ ಕೋಡಬೇಕು. ಸೀನುವಾಗ, ಕೆಮ್ಮುವಾಗ ಮಾಸ್ಕ್ ಹಾಕಬೇಕು, ಸಾರ್ವಜನಿಕ ಅಂತರ ಕಾಪಾಡಬೇಕು ಎಂದು ಸಚಿವರು ಸಲಹೆ ನೀಡಿದ್ದರು.
ಸೋಂಕು ಬಂದಿರುವವರು ಆ್ಯಂಟಿ ಬಯೋಟಿಕ್ಸ್ ತೆಗೆದುಕೊಳ್ಳುತ್ತಿದ್ದಾರೆ, ಇದು ಸರಿಯಲ್ಲ. ನಮ್ಮಲ್ಲಿ ಯಾವುದೇ ಔಷಧ ಕೊರತೆ ಇಲ್ಲ. ಬೇಸಿಗೆಗೆ ನಾವು ಕಾಲಿಟ್ಟಿದ್ದು, ಬಿಸಿಲಿನ ತಾಪದಿಂದ ಜನ ಬಳಲುತ್ತಿದ್ದಾರೆ. ಪ್ರತಿನಿತ್ಯ ಹೆಚ್ಚು ನೀರು ಸೇವಿಸಬೇಕು. ಕನಿಷ್ಠ 2-3 ಲೀಟರ್ ನೀರು ಸೇವಿಸಿ. ಎಳನೀರು ಕುಡಿಯುವುದು ಉತ್ತಮ ಎಂದು ಹೇಳಿದ್ದಾರೆ.
ಇದನ್ನೂ ಓದಿ : H3 N2 ವೈರಸ್ ಭೀತಿ: ರಾಜ್ಯದಲ್ಲಿ 26 ಕೇಸ್ ಪತ್ತೆ, ಮುಂಜಾಗ್ರತೆ ಅಗತ್ಯ ಎಂದ ಸಚಿವ ಸುಧಾಕರ್