ಪ್ರಯಾಗ್‌ರಾಜ್: ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆ ವಿರುದ್ಧ ಅಂಜುಮನ್ ಇಂತೇಜಾಮಿಯಾ ಮಸೀದಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಅಲಹಾಬಾದ್ ಹೈಕೋರ್ಟ್, ವಾರಾಣಸಿ ಜಿಲ್ಲಾ ನ್ಯಾಯಾಲಯ ಸೂಚಿಸಿದಂತೆ ಸರ್ವೇ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅನುಮತಿ ನೀಡಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಜ್ಞಾನವಾಪಿ ಮಸೀದಿಯ ಸರ್ವೇಗೆ ಜಿಲ್ಲಾ ಕೋರ್ಟ್ನಿಂದ ಅನುಮತಿ ಪಡೆದಿತ್ತು. ಇದರ ವಿರುದ್ಧ ಮಸೀದಿ ಸಮಿತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ತುರ್ತು ವಿಚಾರಣೆ ನಡೆಸಿದ್ದ ಸುಪ್ರೀಂ, ಸರ್ವೇಗೆ ತಡೆ ನೀಡಿ ಯಥಾಸ್ಥಿತಿ ಕಾಪಾಡಲು ಸೂಚಿಸಿತ್ತು. ಅಲ್ಲದೇ, ಅರ್ಜಿಯನ್ನು ಹೈಕೋರ್ಟ್ ಶೀಘ್ರ ವಿಚಾರಣೆ ನಡೆಸಿ ತೀರ್ಪು ನೀಡಲೂ ಆದೇಶಿಸಿತ್ತು.
ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಜುಲೈ 27 ರಂದು ವಿಚಾರಣೆ ನಡೆಸಿ ಆಗಸ್ಟ್ 3 ಕ್ಕೆ ತೀರ್ಪು ಕಾಯ್ದಿರಿಸಿತ್ತು. ಅದರಂತೆ ಇಂದು ಮುಖ್ಯ ನ್ಯಾಯಮೂರ್ತಿ ಪ್ರಿಟಿಂಕರ್ ದಿವಾಕರ್ ಅವರು ಎಎಸ್‌ಐ ಸಮೀಕ್ಷೆಗೆ ಅಸ್ತು ಎಂದಿದೆ. ಇದರಿಂದ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಅರ್ಜಿಗೆ ಹಿನ್ನಡೆಯಾಗಿದೆ.
ನಾಲ್ಕೇ ತಾಸಲ್ಲಿ ಸರ್ವೇಗೆ ತಡೆ: ವಾರಾಣಸಿ ಜಿಲ್ಲಾ ಕೋರ್ಟ್ ಮಸೀದಿ ಸರ್ವೇಗೆ ಅವಕಾಶ ನೀಡಿತ್ತು. ಅದರಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಸಮೀಕ್ಷೆಗೆ ಮುಂದಾಗಿದ್ದರು. ಇದರ ವಿರುದ್ಧ ಮಸೀದಿ ಸಮಿತಿ ಸುಪ್ರೀಂಗೆ ಅರ್ಜಿ ಹಾಕಿ, ನಾಲ್ಕೇ ತಾಸಲ್ಲಿ ತಡೆ ತಂದಿದ್ದರು. ಜುಲೈ 25 ರಂದು ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ, ಎಎಸ್‌ಐ ಸಮೀಕ್ಷೆಯನ್ನು ಜುಲೈ 26 ರಂದು ಸಂಜೆ 5 ಗಂಟೆಯವರೆಗೆ ನಡೆಸದಂತೆ ಆದೇಶಿಸಿತು. ಒಂದು ದಿನದ ನಂತರ, ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಸೀದಿ ನಿರ್ವಹಣಾ ಸಮಿತಿಗೆ ಸಮಯಾವಕಾಶವನ್ನೂ ನೀಡಿತು.
ದೇವಸ್ಥಾನವಿದ್ದ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂಬುದನ್ನು ನಿರ್ಧರಿಸಲು ವಾರಾಣಸಿ ನ್ಯಾಯಾಲಯ ಎಎಸ್‌ಐಗೆ ಸರ್ವೇ ನಡೆಸಲು ನಿರ್ದೇಶನ ನೀಡಿತ್ತು. ಅಗತ್ಯವಿರುವ ಕಡೆಗಳಲ್ಲಿ ಉತ್ಖನನ ನಡೆಸಲೂ ಅವಕಾಶ ನೀಡಿತ್ತು.
'ಜ್ಞಾನವಾಪಿ ಕಟ್ಟಡಕ್ಕೆ ಯಾವುದೇ ಹಾನಿ ಉಂಟಾಗದಂತೆ ಸರ್ವೇ ನಡೆಸಲು ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಸಮೀಕ್ಷೆ ನಡೆಸಲು ಅನುಮತಿ ನೀಡಿದೆ. ಇದರ ಬಳಿಕ ಅಲ್ಲಿದ್ದದ್ದು ದೇಗುಲವೋ, ಮಸೀದಿಯೋ ಎಂಬುದು ಗೊತ್ತಾಗಲಿದೆ. ಶೀಘ್ರವೇ ಸಮೀಕ್ಷೆ ನಡೆಯಲಿದೆ' ಎಂದು ಹಿಂದು ಪಕ್ಷಗಾರರ ವಕೀಲ ವಿಷ್ಣು ಶಂಕರ್ ಜೈನ್ ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ; ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಗ್ರೀನ್ ಸಿಗ್ನಲ್ : ಅಲಹಾಬಾದ್ ಹೈಕೋರ್ಟ್ ತೀರ್ಪು