ಉತ್ತರಪ್ರದೇಶ: ಭಾರೀ ವಿವಾದ ಸೃಷ್ಟಿಸಿರುವ ವಾರಾಣಸಿಯ ಗ್ಯಾನವಾಪಿ ಮಸೀದಿಯ ಸರ್ವೇ ಕಾರ್ಯವನ್ನು ತ್ವರಿತಗತಿಯಲ್ಲಿ ಮುಂದುವರಿಸಿ, ಮೇ 17 ರೊಳಗೆ ಸಂಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ವಾರಾಣಸಿಯ ಗ್ಯಾನವಾಪಿ ಮಸೀದಿಯೊಳಗೆ ಸಮೀಕ್ಷೆ ನಡೆಸಬಹುದೇ ಎಂಬ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ನೆಲಮಾಳಿಗೆ ಸೇರಿದಂತೆ ಇಡೀ ಪ್ರದೇಶವನ್ನು ಸರ್ವೇ ಮಾಡಿ ವಿಡಿಯೋಗ್ರಾಫ್ ಮಾಡಬೇಕು ಎಂದು ಸೂಚಿಸಿತ್ತು. ಇದಕ್ಕೆ ಮಸೀದಿ ಮತ್ತು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು.
ಇದೀಗ ಆಕ್ಷೇಪಣಾ ಅರ್ಜಿಗಳನ್ನು ವಿಚಾರಣೆ ನಡೆಸಿದ ವಾರಾಣಸಿ ಕೋರ್ಟ್ ಮಸೀದಿಯ ಸರ್ವೇ ಕಾರ್ಯವನ್ನು ಮುಂದುವರಿಸಿ, ಮೇ 17 ರೊಳಗೆ ವರದಿ ನೀಡಬೇಕು. ಅಲ್ಲದೇ, ಸರ್ವೇ ಕಾರ್ಯಕ್ಕಾಗಿ ಹೆಚ್ಚುವರಿ ಕಮಿಷನರ್ರನ್ನು ನೇಮಕ ಮಾಡಿ ಆದೇಶಿಸಿದೆ. ಕೋರ್ಟ್ ಈ ಮೊದಲು ನೇಮಿಸಿದ್ದ ಅಜಯ್ ಮಿಶ್ರಾ ಅವರೊಂದಿಗೆ ಎರಡನೇ ಕಮಿಷನರ್ ಆಗಿ ವಿಶಾಲ್ ಕುಮಾರ್ ಸಿಂಗ್ ಅವರನ್ನು ನೇಮಿಸಿದೆ.
ಈ ಹಿಂದೆ ಮಸೀದಿಯನ್ನು ಸರ್ವೇ ನಡೆಸಿ ಮೇ 10 ರೊಳಗೆ ವರದಿ ಸಲ್ಲಿಸುವಂತೆ ಸ್ಥಳೀಯ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ಮುಸ್ಲಿಂ ಸಂಘಟನೆಗಳ ವಿರೋಧದಿಂದಾಗಿ ಸರ್ವೇ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಓದಿ: ಕೋಟ್ಯಂತರ ರೂ. ನರೇಗಾ ಹಣ ದುರ್ಬಳಕೆ ಪ್ರಕರಣ.. ಜಾರ್ಖಂಡ್ ಗಣಿ ಕಾರ್ಯದರ್ಶಿ ಇ.ಡಿ. ವಶಕ್ಕೆ