ವಾರಣಾಸಿ(ಉತ್ತರ ಪ್ರದೇಶ): ವಕೀಲರು ಮುಷ್ಕರ ನಡೆಸಿದ್ದರಿಂದ ಶಿವಲಿಂಗ ಪತ್ತೆಯಾದ ಜ್ಞಾನವಾಪಿ ಮಸೀದಿಯನ್ನು ಮತ್ತೊಮ್ಮೆ ಸರ್ವೇ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ವಾರಣಾಸಿ ಕೋರ್ಟ್ ಮುಂದೂಡಿದೆ. ವಕೀಲರ ಪ್ರತಿಭಟನೆಯಿಂದಾಗಿ ಅರ್ಜಿ ವಿಚಾರಣೆಗೆ ತೊಡಕುಂಟಾದ ಕಾರಣ ಇಂದು ನಡೆಯಬೇಕಾಗಿದ್ದ ವಿಚಾರಣೆ ಸ್ಥಗಿತಗೊಳಿಸಿ, ವಿಚಾರಣೆಯ ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಕೋರ್ಟ್ ಹೇಳಿದೆ.
ಜ್ಞಾನವಾಪಿ ಮಸೀದಿ ಸರ್ವೇಯನ್ನು ನಿಲ್ಲಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಿಚಾರಣೆ ನಡೆಸಿ, ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗವನ್ನು ರಕ್ಷಣೆ ಮಾಡಬೇಕು. ಮಸೀದಿಯಲ್ಲಿ ಪ್ರಾರ್ಥನೆಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಿ ಎಂದು ವಾರಣಾಸಿ ಜಿಲ್ಲಾಡಳಿತಕ್ಕೆ ಸುಪ್ರೀಂ ಸೂಚಿಸಿತ್ತು.
ಇದಲ್ಲದೇ, ಶಿವಲಿಂಗ ಪತ್ತೆಯಾದ ಬಳಿಕ ಮಸೀದಿಯ ಪ್ರದೇಶದ ಸುತ್ತಲೂ ವಾರಣಾಸಿ ಕೋರ್ಟ್ ಆದೇಶದ ಮೇರೆಗೆ ನಿರ್ಬಂಧ ವಿಧಿಸಲಾಗಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ, ವಾರಣಾಸಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ತಡೆ ನೀಡಿಲ್ಲ.
ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದೊಳಗೆ ಶಿವಲಿಂಗ ಪತ್ತೆಯಾದ ಬಳಿಕ ಆ ಕೊಳವನ್ನು ಸೀಲ್ ಮಾಡಲಾಗಿದೆ. ಸಿಆರ್‌ಪಿಎಫ್ ತುಕಡಿಯ ಭದ್ರತೆ ನೀಡಲಾಗಿದೆ. ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಓದಿ: ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಗೆ ಸುಪ್ರೀಂ ಸಮ್ಮತಿ