ವಾರಾಣಸಿ: ಜ್ಞಾನವಾಪಿ ಮಸೀದಿ ಹಾಗೂ ಶೃಂಗಾರ ಗೌರಿ ದೇವಸ್ಥಾನ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಾಣಸಿಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ. ಎರಡೂ ಕಡೆ ವಾದ - ಪ್ರತಿ ವಾದ ಆಲಿಸಿದ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ನಾಳೆಯೂ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.
ಎರಡು ಗಂಟೆಗಳ ವಾದ- ಪ್ರತಿವಾದ ಆಲಿಸಿದ ಜಡ್ಜ್ ನಾಳೆಗೆ ವಿಚಾರಣೆ ಮುಂದೂಡಿದರು. ಮಸೀದಿಯ ಹಿಂದೆ ಪ್ರಾರ್ಥನೆಗೆ ಅವಕಾಶ ನೀಡುವಂತೆ ಐವರು ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ನ್ಯಾಯಾಲಯ ಮಸೀದಿಯಲ್ಲಿ ಸರ್ವೇ ನಡೆಸಲು ಅವಕಾಶ ಕೂಡಾ ಕಲ್ಪಿಸಿತ್ತು. ಸರ್ವೇ ಮಾಡಿ ವರದಿ ನೀಡುವಂತೆ ಕೋರ್ಟ್ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
ಇಲ್ಲಿವೆ ಪ್ರಕರಣದ 10 ಪ್ರಮುಖಾಂಶಗಳು
- ಶೃಂಗಾರ ಗೌರಿ, ಗಣೇಶ, ಹನುಮಂತ ಮತ್ತು ನಂದಿ ವಿಗ್ರಹಗಳ ಪೂಜೆಗೆ ಅನುಮತಿ ಕೋರಿ ದೆಹಲಿ ಮೂಲದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಹಿಂದಿನ ಆದೇಶ ಅನ್ವಯ ವಿಡಿಯೋಗ್ರಫಿ ಮತ್ತು ಸಮೀಕ್ಷೆ ಕಾರ್ಯ ಮಾಡಲಾಗುತ್ತಿದೆ.
- ಏಪ್ರಿಲ್ 18 ರಂದು ಮಹಿಳೆಯರು ನ್ಯಾಯಾಲಯದ ಮೊರೆ ಹೋಗಿದ್ದರು. ಇಲ್ಲಿರುವ ವಿಗ್ರಹಗಳಿಗೆ ಯಾವುದೇ ಹಾನಿ ಮಾಡದಂತೆ ತಡೆಯಲು ಕೋರ್ಟ್ಗೆ ಮನವಿ ಸಲ್ಲಿಸಿದ್ದರು.
- ಏಪ್ರಿಲ್ 26 ರಂದು ನ್ಯಾಯಾಲಯ ರಂಜಾನ್ ಬಳಿಕ ಇಲ್ಲಿ ಸಮೀಕ್ಷೆ ಹಾಗೂ ವಿಡಿಯೋ ಮಾಡುವಂತೆ ಸೂಚನೆ ನೀಡಿತ್ತು. ಸಮೀಕ್ಷೆ ನಡೆಸಲು ಆಯುಕ್ತರ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಉಭಯ ಪಕ್ಷಗಳ ಸಮ್ಮುಖದಲ್ಲಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯ ವರದಿ ಸಿದ್ಧಪಡಿಸಿ ಮೇ 10 ರಂದು ನೀಡುವಂತೆ ಸೂಚನೆ ನೀಡಿತ್ತು.
- ಕೋರ್ಟ್ನಿಂದ ನೇಮಕಗೊಂಡ ಕಮಿಷನರ್ ಮತ್ತು ಅವರ ತಂಡ ಮೇ 8 ರಂದು ವಾರಾಣಸಿಯ ಜ್ಞಾನವಾಪಿ-ಶೃಂಗಾರ್ ಗೌರಿ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಿತ್ತು. ಆದರೆ ಮಸೀದಿ ಆಡಳಿತ ಮಂಡಳಿ ಅದನ್ನು ವಿರೋಧಿಸಿದ್ದರಿಂದ ಸಮೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ.
- ಮಸೀದಿ ಆಡಳಿತ ಸಮಿತಿ (ಅಂಜುಮನ್ ಇಂತೇಝಾಮಿಯಾ ಮಸೀದ್) ನ್ಯಾಯಾಲಯದಿಂದ ನೇಮಕಗೊಂಡ ಕಮಿಷನರ್ ಅವರನ್ನು ಬದಲಾಯಿಸಲು ಮನವಿ ಮಾಡಿತ್ತು.
- ಮಸೀದಿಯೊಳಗೆ ವಿಡಿಯೋಗ್ರಫಿ ಮಾಡುವಂತೆ ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ. ಆದರೆ, ಬ್ಯಾರಿಕೇಡ್ ಹೊರಗಿನ 'ಚಬುತ್ರಾ' (ಅಂಗಣ) ವರೆಗೆ ಮಾತ್ರ ವಿಡಿಯೋ ಮಾಡುವಂತೆ ಮಸೀದಿ ಆಡಳಿತ ಸಮಿತಿಯ ಪರ ವಕೀಲ ಅಭಯ್ ನಾಥ್ ಯಾದವ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
- ವರದಿಗಳ ಪ್ರಕಾರ ಅರ್ಜಿದಾರರಲ್ಲಿ ಒಬ್ಬರಾದ ರಾಖಿ ಸಿಂಗ್ ಅವರು ತಮ್ಮ ಅರ್ಜಿಯನ್ನು ಹಿಂಪಡೆದಿದ್ದರು ಎಂದು ಸುದ್ದಿಯಾಗಿತ್ತು. ಆದರೆ, ಸೋಮವಾರ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ಸುದ್ದಿಯನ್ನ ತಳ್ಳಿ ಹಾಕಿದ್ದಾರೆ.
- ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದ್ದರೂ ಪಾಲನೆಯಾಗಿಲ್ಲ ಎಂದು ಅರ್ಜಿದಾರರ ಪರ ವಕೀಲ ಸೋಹನ್‌ಲಾಲ್ ಆರ್ಯ ಆರೋಪಿಸಿದ್ದಾರೆ. ನಾವು ಸಮೀಕ್ಷೆಗಾಗಿ ಅಲ್ಲಿಗೆ ತಲುಪಲು ಸಹ ಅನುಮತಿ ನೀಡಿಲ್ಲ. ಅಲ್ಲಿ ಹೆಚ್ಚು ಜನರು ಸೇರಿದ್ದರಿಂದ ಸಮೀಕ್ಷೆ ನಡೆಸಲಾಗಿಲ್ಲ
- ಮತ್ತೊಂದೆಡೆ, ಇನ್ನೊಂದು ಬದಿಯನ್ನು ಪ್ರತಿನಿಧಿಸುವ ಎಖ್ಲಾಕ್ ಅಹ್ಮದ್ ಸದ್ಯಕ್ಕೆ ಸಮೀಕ್ಷೆಯಲ್ಲಿ ಭಾಗವಹಿಸಲಿಲ್ಲ. ಈ ಬಗ್ಗೆ ವಕೀಲ ಕಮಿಷನರ್ಗೆ ಮಾಹಿತಿ ನೀಡಿದ್ದೇವೆ. ಒಬ್ಬರು ಭಾಗಿಯಾಗದ ಕಾರಣ ಸಮೀಕ್ಷೆ ಸ್ಥಗಿತಗೊಂಡಿದೆ ಎಂದರು.
- ವಾರಾಣಸಿ ನ್ಯಾಯಾಲಯವು ಸೋಮವಾರ ಎರಡೂ ಕಡೆಯ ವಾದಗಳನ್ನು ಆಲಿಸಿದ್ದು, ನಾಳೆಯೂ ವಿಚಾರಣೆ ಮುಂದುವರಿಯಲಿದೆ. ಇದನ್ನು ಓದಿ:ಮೌಢ್ಯಕ್ಕೆ ಕೊಕ್ಕೆ.. ವಿಧವೆ ಕುಂಕುಮ, ಬಳೆ, ಮಾಂಗಲ್ಯ ತೆಗೆಯಬೇಕಿಲ್ಲ.. ಮಹಾ ಗ್ರಾಪಂ ಕ್ರಾಂತಿಕಾರಿ ನಿರ್ಣಯ..