ವಾರಣಾಸಿ (ಉತ್ತರ ಪ್ರದೇಶ): ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷಾ ವರದಿಯನ್ನು ಇಂದು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಆದರೆ ಎಎಸ್ಐ ವರದಿ ಸಲ್ಲಿಕೆಗೆ ಮತ್ತೊಮ್ಮೆ ಮೂರು ವಾರಗಳ ಕಾಲಾವಕಾಶ ಕೇಳಿದೆ. ಮಂಗಳವಾರ ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಎಎಸ್ಐ ಪರ ಸರ್ಕಾರಿ ವಕೀಲ ಅಮಿತ್ ಶ್ರೀ ವಾಸ್ತವ್ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಲಿದೆ.
ಮಸೀದಿ ಸಂಕೀರ್ಣದ ವೈಜ್ಞಾನಿಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಮಂಗಳವಾರ(ನ.28) ಕೊನೇ ದಿನವಾಗಿತ್ತು. ಮಸೀದಿಯ ವೈಜ್ಞಾನಿಕ ಸಮೀಕ್ಷೆ ಒಂದು ತಿಂಗಳ ಹಿಂದೆಯೇ ಮುಕ್ತಾಯಗೊಂಡಿದೆ. ಆದರೂ ವರದಿ ಸಲ್ಲಿಸಲು ನ್ಯಾಯಾಲಯ ನೀಡಿದ್ದ ಗಡುವುಗಳನ್ನು ವಿಸ್ತರಿಸಲು ಎಎಸ್ಐ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದೆ. ಎಎಸ್ಐ ನವೆಂಬರ್ 17 ರಂದು ವರದಿಯನ್ನು ಸಲ್ಲಿಸಬೇಕಾಗಿತ್ತು. ಆದರೆ ನವೆಂಬರ್ 18 ರಂದು ಹೆಚ್ಚುವರಿ 15 ದಿನಗಳ ಕಾಲಾವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಎಎಸ್ಐ ತನ್ನ ಅರ್ಜಿಯಲ್ಲಿ ಮಸೀದಿ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದ್ದು, ನೆಲದ ಪೆನೆಟ್ರೇಟಿಂಗ್ ರಾಡಾರ್(ಜಿಪಿಆರ್) ನಡೆಸಿದ ವರದಿಯ ತಯಾರಿ ನಡೆಯುತ್ತಿದೆ. ಆದ್ದರಿಂದ ವಿವರವಾದ ಸಮೀಕ್ಷೆಯ ವರದಿಯನ್ನು ತಯಾರಿಸಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿತ್ತು. ಜಿಲ್ಲಾ ನ್ಯಾಯಾಧೀಶ ಎ. ಕೆ. ವಿಶ್ವೇಶ್ ಅವರು ನವೆಂಬರ್ 28ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿ, ಹೆಚ್ಚುವರಿ 10 ದಿನಗಳ ಕಾಲಾವಕಾಶ ನೀಡಿದ್ದರು.
ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯದ ಬಳಿಯ ಜ್ಞಾನವಾಪಿ ಆವರಣದಲ್ಲಿ ಎಎಸ್ಐ ಸರ್ವೇ ನಡೆಸಿದ್ದು, 17ನೇ ಶತಮಾನದಲ್ಲಿ ಹಿಂದೂ ದೇವಾಲಯವನ್ನು ಕೆಡವಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಎಎಸ್ಐ ಈ ಸಮೀಕ್ಷೆಯನ್ನು ಕೈಗೊಂಡಿದೆ. ಮಾಹಿತಿ ಪ್ರಕಾರ, ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯಲ್ಲಿ ಸುಮಾರು 100 ದಿನಗಳ ಕಾಲ ಸಮೀಕ್ಷೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಎರಡೂ ಕಡೆಯ ಜನರು, ಎಎಸ್ಐ ವಿಜ್ಞಾನಿಗಳು ಮತ್ತು ಸ್ಥಳೀಯ ಆಡಳಿತದ ಜನರು ಭಾಗಿಯಾಗಿದ್ದರು. ಸಮೀಕ್ಷೆಯ ಸಮಯದಲ್ಲಿ ವಿಡಿಯೋಗ್ರಫಿ ಕೂಡ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಹಿನ್ನೆಲೆ: ದೇವಾಲಯದ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಶೃಂಗಾರ್ ಗೌರಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ನಾಲ್ವರು ಮಹಿಳೆಯರು 2021ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ವಾರಾಣಸಿ ಜಿಲ್ಲಾ ನ್ಯಾಯಾಲಯ ವಿಡಿಯೋ ಸಮೀಕ್ಷೆಗೆ ಅನುಮತಿ ನೀಡಿತ್ತು. ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾಗಿತ್ತು. ಶಿವಲಿಂಗ ಪತ್ತೆಯಾದ ಹಿನ್ನೆಲೆ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಲಾಗಿತ್ತು. ಆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಡಾ. ಅಜಯ್ ಕೃಷ್ಣ ವಿಶ್ವೇಶ್ ಅವರು ಇದೇ ವರ್ಷ ಜುಲೈ 21 ರಂದು ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿದ್ದರು. ಜ್ಞಾನವಾಪಿ ಮಸೀದಿಯ ಸೀಲ್ ಮಾಡಿದ ವುಜುಖಾನಾ ಪ್ರದೇಶವನ್ನು ಹೊರತುಪಡಿಸಿ ಉಳಿದ ಜಾಗವನ್ನು ಎಎಸ್ಐ ಸಮೀಕ್ಷೆಗೆ ಆದೇಶಿಸಲಾಗಿತ್ತು.
ಜುಲೈ 24 ರಂದು ಎಎಸ್ಐ ಸಮೀಕ್ಷೆ ಪ್ರಾರಂಭಿಸಿತ್ತು. ಆದರೆ ಮಸೀದಿ ಆಡಳಿತ ಸಮಿತಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರಿಂದ ಕೆಲವೇ ಗಂಟೆಗಳಲ್ಲಿ ಸಮೀಕ್ಷೆ ಕಾರ್ಯ ಸ್ಥಗಿತಗೊಂಡಿತ್ತು. ಹಾಗೂ ಮುಸ್ಲಿಂ ಅರ್ಜಿದಾರರು ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವಂತೆ ಹೇಳಿತ್ತು. ಅದರಂತೆ ಅಂಜುಮಾನ್ ಅಂತೇಜಾಮಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ಸಮೀಕ್ಷೆಗೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿತ್ತು. ಇದಾದ ನಂತರ ಅಲಹಾಬಾದ್ ಹೈಕೋರ್ಟ್ ಸಮೀಕ್ಷೆಗೆ ಅನುಮತಿ ನೀಡಿತ್ತು. ಅಲಹಾಬಾದ್ ತೀರ್ಪು ಪ್ರಶ್ನಿಸಿ, ಮಸೀದಿಯ ಆಡಳಿತ ಸಮಿತಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಆ ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿತ್ತು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷಾ ವರದಿ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ ಕೇಳಿದ ಎಎಸ್ಐ