ವಾರಾಣಸಿ: ಜ್ಞಾನವಾಪಿ ಸಮೀಕ್ಷೆಯ ಎಎಸ್ಐ ವರದಿ ಯಾವಾಗ ಬರಲಿದೆ ಎಂಬ ಬಗ್ಗೆ ದೇಶದಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ವಾಸ್ತವದಲ್ಲಿ ನೋಡಿದರೆ ಜ್ಞಾನವಾಪಿ ಸಮೀಕ್ಷೆಯ ಕೆಲಸ ಪೂರ್ಣಗೊಂಡಿದೆ ಮತ್ತು ಎಎಸ್ಐ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ಮಾತ್ರ ಇದೆ. ಆದರೂ ವರದಿ ಸಲ್ಲಿಸಲು ಎಎಸ್ಐ ಮತ್ತೆ ಮತ್ತೆ ಕಾಲಾವಕಾಶ ಕೋರುತ್ತಿದೆ. ಪ್ರಸ್ತುತ ಜ್ಞಾನವಾಪಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯ ವರದಿ ಸಲ್ಲಿಕೆಗೆ ಮತ್ತೆ ಮೂರು ವಾರ ಕಾಲಾವಕಾಶ ನೀಡಬೇಕು ಎಂದು ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆ (ಎಎಸ್ಐ) ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಇದಕ್ಕೂ ಮುನ್ನ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷಾ ವರದಿ ಸಲ್ಲಿಸಲು ವಾರಾಣಸಿ ಜಿಲ್ಲಾ ನ್ಯಾಯಾಲಯವು ನವೆಂಬರ್ 28 ರವರೆಗೆ ಸಮಯ ನೀಡಿತ್ತು. ಆದರೆ, ಎಎಸ್ಐ ವರದಿ ಸಲ್ಲಿಸಲು ಏಕೆ ತಡ ಮಾಡುತ್ತಿದೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಹೀಗಾಗಿ ಈ ವಿಷಯದ ಬೆನ್ನಟ್ಟಿದ ಈಟಿವಿ ಭಾರತ್ ವರದಿಗಾರರ ತಂಡಕ್ಕೆ ಹಲವಾರು ಮಾಹಿತಿಗಳು ಲಭ್ಯವಾಗಿವೆ. ನಮ್ಮ ವರದಿಗಾರರು ತಜ್ಞರೊಂದಿಗೆ ಮಾತನಾಡಿದ್ದು, ವರದಿ ಸಲ್ಲಿಕೆಯ ವಿಳಂಬದ ಕಾರಣಗಳನ್ನು ನೋಡೋಣ.
"ಪರಿಣಿತ ಪುರಾತತ್ವ ಶಾಸ್ತ್ರಜ್ಞರು, ಸರ್ವೇಯರ್ಗಳು ಭೂ ಭೌತಶಾಸ್ತ್ರಜ್ಞರು ಮುಂತಾದವರು ಸಂಗ್ರಹಿಸಿದ ಡೇಟಾವನ್ನು ಒಟ್ಟುಗೂಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ವಿವಿಧ ತಜ್ಞರು ಮತ್ತು ವಿಭಿನ್ನ ಸಾಧನಗಳಿಂದ ಬಂದ ಮಾಹಿತಿಯನ್ನು ಸಮೀಕರಿಸುವುದು ಕಷ್ಟಕರ ಮತ್ತು ಇದು ನಿಧಾನವಾದ ಪ್ರಕ್ರಿಯೆಯಾಗಿದೆ. ಹೀಗಾಗಿ ವರದಿಯನ್ನು ಪೂರ್ಣಗೊಳಿಸಲು ಮತ್ತು ಅಂತಿಮ ಸಮೀಕ್ಷಾ ವರದಿ ಸಲ್ಲಿಸಲು ಇನ್ನೊಂದಿಷ್ಟು ಕಾಲಾವಕಾಶ ಬೇಕಾಗುತ್ತದೆ" ಎನ್ನುತ್ತಾರೆ ಇಲ್ಲಿನ ಹಿರಿಯ ಅಧಿಕಾರಿಗಳು.
ವಿವಾದಕ್ಕೆ ಎಡೆಮಾಡದಂತೆ ವರದಿ ನೀಡಲು ತಯಾರಿ: ವರದಿ ಸಲ್ಲಿಕೆಯಲ್ಲಿನ ವಿಳಂಬ ಮತ್ತು ವರದಿ ತಯಾರಿಕೆಗೆ ತಗಲುವ ಸಮಯದ ಬಗ್ಗೆ ಬಿಎಚ್ಯು ನ ಭೂಭೌತಶಾಸ್ತ್ರ ಮತ್ತು ಪುರಾತತ್ವಶಾಸ್ತ್ರದ ಪ್ರಾಧ್ಯಾಪಕ ಪಿಬಿ ರಾಣಾ ಅವರೊಂದಿಗೆ ಈಟಿವಿ ಭಾರತ್ ಮಾತನಾಡಿದೆ . ಈ ಬಗ್ಗೆ ಮಾಹಿತಿ ನೀಡಿದ ಪ್ರೊ. ರಾಣಾ, "ವರದಿಯನ್ನು ಸಲ್ಲಿಸಿದ ನಂತರ ಅದರ ಬಗ್ಗೆ ಯಾವುದೇ ವಿವಾದ ಉಂಟಾಗದಂತೆ ಎಎಸ್ಐ ತೀವ್ರ ಮುನ್ನೆಚ್ಚರಿಕೆ ವಹಿಸುತ್ತಿದೆ. ವರದಿಯ ಬಗ್ಗೆ ತಮ್ಮತ್ತ ಯಾರೂ ಬೊಟ್ಟು ಮಾಡದಂತೆ ವರದಿ ತಯಾರಿಸಲು ಅವರು ಸಾಕಷ್ಟು ಚರ್ಚೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ವರದಿ ಸಲ್ಲಿಕೆ ವಿಳಂಬವಾಗುತ್ತಿರಬಹುದು" ಎಂದು ಹೇಳಿದರು.
ಸಮೀಕ್ಷೆ ನಡೆಸುತ್ತಿರುವವರಿಗೆ ನಿರ್ದಿಷ್ಟ ರೀತಿಯ ಸೂಚನೆಗಳು ಬಂದಿರುವ ಸಾಧ್ಯತೆಯಿದೆ. ಹೀಗಾಗಿ ಅವರು ಎಲ್ಲ ಮಾಹಿತಿಗಳನ್ನು ಪರೀಕ್ಷಿಸಿದ ನಂತರವೇ ವರದಿ ತಯಾರಿಸುತ್ತಿರಬಹುದು. ಸಮೀಕ್ಷೆಯು ಅಂದಾಜುಗಳನ್ನು ಆಧರಿಸಿದೆ. ನಿಗದಿತ ದಿನಾಂಕಗಳಿರುತ್ತವೆ ಎಂಬ ಖಚಿತತೆ ಇರುವುದಿಲ್ಲ. ಇತಿಹಾಸವನ್ನು ಶೇಕಡಾ ನೂರರಷ್ಟು ನಿಖರವಾಗಿ ಹೇಳುವ ಯಾವುದೇ ತಂತ್ರಜ್ಞಾನವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, 10 ರಿಂದ 20 ಪ್ರತಿಶತ ತರ್ಕ ಮತ್ತು ಉಲ್ಲೇಖಗಳು ಮತ್ತು ಐತಿಹಾಸಿಕ ವಿಷಯಗಳನ್ನು ಸೇರಿಸುವ ಮೂಲಕ ವರದಿಯನ್ನು ತಯಾರಿಸಲಾಗುತ್ತದೆ. ಈ ಅಧಿಕಾರಿಗಳು ನಂತರ ಯಾವುದೇ ಸಮಸ್ಯೆ ಉಂಟಾಗದಂತೆ ಕೆಲಸ ಮಾಡುತ್ತಿದ್ದಾರೆ. ಸಮೀಕ್ಷಾ ತಂಡದಲ್ಲಿ ಅನೇಕ ಅನುಭವಿಗಳಿರುವುದರಿಂದ ವರದಿ ತಯಾರಿಸುವಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ತರ್ಕ ಹೊಂದಿರಬಹುದು. ಈ ಬಗ್ಗೆ ಒಮ್ಮತ ಮೂಡಬೇಕು ಎನ್ನುತ್ತಾರೆ ಪ್ರೊ. ಪಿಬಿ ರಾಣಾ.
ಸಮಗ್ರ ವರದಿ: ಐತಿಹಾಸಿಕ ಸಂಗತಿಗಳು ಮತ್ತು ಸ್ಥಳದಲ್ಲಿ ಕಂಡುಬರುವ ಸಂಗತಿಗಳು ನಿಜವಲ್ಲ. ಅಂತಹ ಪರಿಸ್ಥಿತಿಯಲ್ಲಿ, ವರದಿಯಲ್ಲಿ ಅದನ್ನು ಹೇಗೆ ವ್ಯಾಖ್ಯಾನಿಸಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಐತಿಹಾಸಿಕ ಮೂಲಗಳು, ಪೌರಾಣಿಕ ಮೂಲಗಳು ಮತ್ತು ವಸ್ತು ಪತ್ತೆಯಾದ ಸ್ಥಳವನ್ನು ಸೇರಿಸಿ ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಸಮೀಕ್ಷಾ ತಂಡವು ಅದನ್ನು ಹೇಗೆ ಬರೆಯಬೇಕು ಎಂಬುದರ ಬಗ್ಗೆ ಸಮಯ ತೆಗೆದುಕೊಳ್ಳುತ್ತಿದೆ. ಜಿಪಿಆರ್ ಮತ್ತು ವೈಜ್ಞಾನಿಕ ವಿಷಯಗಳ ಫಲಿತಾಂಶವನ್ನು ಅಂತಿಮಗೊಳಿಸಲಾಗಿದೆ. ಆದರೆ, ಇದು ರಾಜಕೀಯ ವಿಷಯವಾಗಿರುವುದರಿಂದ, ಅನೇಕ ರೀತಿಯ ವಿರೋಧಗಳಿವೆ. ಹೀಗಾಗಿ ಇದನ್ನು ಸರ್ವಾನುಮತದಿಂದ ಅಂತಿಮಗೊಳಿಸಲು ಸಮಯ ಬೇಕಾಗುತ್ತದೆ ಎಂದು ರಾಣಾ ಹೇಳಿದರು.
ಸರ್ವೆ ತಂಡದಲ್ಲಿ ಪರಿಣತ ತಜ್ಞರು: ತಂಡದಲ್ಲಿನ 5 ರಿಂದ 6 ಜನ ಬಹಳ ಪ್ರಮುಖರಾಗಿದ್ದಾರೆ. ಇದರಲ್ಲಿ 3 ರಿಂದ 4 ತಾಂತ್ರಿಕ ವಿಜ್ಞಾನಿಗಳಿದ್ದಾರೆ. ಅಲ್ಲದೆ, ಅಲ್ಲಿರುವ ಇತರ ಜನ ತಾಂತ್ರಿಕೇತರ ವಿಜ್ಞಾನ ಅಥವಾ ಇತಿಹಾಸಕಾರರು. ಅಂತಹ ಪರಿಸ್ಥಿತಿಯಲ್ಲಿ ಕೆಲಸ ಮುಗಿಯಲು ಸಮಯ ತೆಗೆದುಕೊಳ್ಳುತ್ತದೆ. ಸಮೀಕ್ಷಾ ತಂಡವು ನ್ಯಾಯಾಲಯದಿಂದ ಸಮಯ ವಿಸ್ತರಣೆ ಕೋರಿದಾಗ, ಜಿಲ್ಲಾ ನ್ಯಾಯಾಧೀಶ ಡಾ. ಅಜಯ್ ಕೃಷ್ಣ ವಿಶ್ವೇಶ್ ಅವರು ಹೆಚ್ಚಿನ ಸಮಯ ಕೋರಲು ಕಾರಣವೇನೆಂದು ಕೇಳಿದ್ದರು ಎಂದು ಪ್ರೊ. ರಾಣಾ ಮಾಹಿತಿ ನೀಡಿದರು.
ಜಿಪಿಆರ್ ಬಗ್ಗೆ ಮಾಹಿತಿ ನೀಡಿದ ಜಿಯೋಫಿಸಿಕ್ಸ್ ಪ್ರಾಧ್ಯಾಪಕ ಉಮಾಶಂಕರ್, ಜಿಪಿಆರ್ ಎಂದರೆ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್. ಇದು ಕಿಲೋ ಹರ್ಟ್ಜ್ ಮತ್ತು ಮೆಗಾ ಹರ್ಟ್ಸ್ನಲ್ಲಿ ಹೆಚ್ಚಿನ ಆವರ್ತನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಪುರಾತತ್ವ ಸಮೀಕ್ಷೆಗಳು ಮತ್ತು ಸಿಲೋ ಸಬ್ ಸರ್ಫೇಸ್ ಇಮೇಜಿಂಗ್ಗಾಗಿ ಬಳಸಲಾಗುತ್ತದೆ. ಇದರಿಂದ ನೀವು ತ್ವರಿತ ಫಲಿತಾಂಶಗಳನ್ನು ಪಡೆಯಬಹುದು. ಪೈಪ್ ಅಥವಾ ಯಾವುದೇ ಲೋಹದ ವಸ್ತು ಇದ್ದರೆ ನಿಮಗೆ ತಕ್ಷಣ ತಿಳಿಯುತ್ತದೆ. ಇದು ಜಿಯೋ ಭೌತಿಕ ಸಮೀಕ್ಷೆಯಲ್ಲಿ ಇರುತ್ತದೆ. ಆ ವಸ್ತುವಿನ ವಯಸ್ಸು ಎಷ್ಟು ಎಂದು ನೀವು ಕಂಡುಹಿಡಿಯಲು ಬಯಸಿದರೆ ಅಥವಾ ಅದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಬಯಸಿದರೆ, ನೀವು ಪ್ರಯೋಗಾಲಯ ಅಧ್ಯಯನ ಮಾಡಬೇಕಾಗುತ್ತದೆ. ಇದು ಕೂಡ ಸಮಯ ತೆಗೆದುಕೊಳ್ಳುತ್ತದೆ ಎಂದರು.
ನೆಲದ ಕೆಳಗೆ ಅಥವಾ ಆ ಸ್ಥಳದಲ್ಲಿ ಏನಾದರೂ ವಸ್ತು ಇದ್ದರೆ, ನೀವು ಭೂಭೌತಿಕ ಜಿಪಿಆರ್ ಮಾಡಿದಾಗ ಮಾನಿಟರ್ ನಲ್ಲಿ ಎಲ್ಲವೂ ಕಾಣಿಸುತ್ತದೆ. ಇದಕ್ಕಾಗಿ ಓರ್ವ ಇಂಟರ್ ಪ್ರಿಟರ್ ಬೇಕಾಗುತ್ತಾರೆ. ಇದರಲ್ಲಿ ಕಾಣಿಸುವುದು ಏನೆಂಬುದನ್ನು ಈ ಇಂಟರ್ಪ್ರಿಟರ್ ನಿರ್ಧರಿಸಬಲ್ಲರು. ಜಿಪಿಆರ್ ನಿಂದ ಆ ಸ್ಥಳದಲ್ಲಿ ಏನನ್ನಾದರೂ ಹೂಳಲಾಗಿದೆಯೇ ಅಥವಾ ಲೋಹದ ವಸ್ತುವಿದೆಯೇ ಎಂಬುದನ್ನು ಕಂಡುಹಿಡಿಯಬಹುದು. ಅಂತಹ ಪರಿಸ್ಥಿತಿಯಲ್ಲಿ, ಅಲ್ಲಿಂದ ಪಡೆದ ವಸ್ತುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಕೆಲಸ ನಡೆಯುತ್ತಿದ್ದರೆ ಅದಕ್ಕೆ ಸಹ ಸಮಯ ತೆಗೆದುಕೊಳ್ಳುತ್ತಿರಬಹುದು ಎಂದು ಉಮಾಶಂಕರ್ ಹೇಳಿದರು.
ಇದನ್ನೂ ಓದಿ : 3 ಬಿಲಿಯನ್ ಡಾಲರ್ ಕ್ರಿಪ್ಟೊಕರೆನ್ಸಿ ಕದ್ದ ಉತ್ತರ ಕೊರಿಯಾ ಹ್ಯಾಕರ್ಗಳು