ಗ್ವಾಲಿಯರ್ (ಮಧ್ಯಪ್ರದೇಶ): ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ದಂಡ ಹಾಕುವ ಬದಲಿಗೆ ವಿಚಿತ್ರವಾದ ಶಿಕ್ಷೆಯನ್ನು ಮಧ್ಯಪ್ರದೇಶದ ಗ್ವಾಲಿಯರ್ ಜನತೆ ಅನುಭವಿಸಬೇಕಾಗಿದೆ.
ಇಲ್ಲಿ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಮೈದಾನಕ್ಕೆ ಕರೆದೊಯ್ದು ಕೊರೊನಾ ಬಗ್ಗೆ ಪ್ರಬಂಧ ಬರೆಯುವ 'ಶಿಕ್ಷೆ'ಯನ್ನು ನೀಡಲಾಗುತ್ತದೆ ಎಂದು ಗ್ವಾಲಿಯರ್ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಈ ಬಗ್ಗೆ ಮಾತನಾಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲೇಂದ್ರ ವಿಕ್ರಮ್ ಸಿಂಗ್, ಸರ್ಕಾರವು ಕೊರೊನಾ ಹರಡದಂತೆ ತಡೆಯಲು ರೋಕೋ-ಟೋಕೋ ಎಂಬ ಅಭಿಯಾನವನ್ನು ಆರಂಭಿಸಿದೆ. ಇದರ ಅಡಿಯಲ್ಲಿ ಕೊರೊನಾ ಸೋಂಕಿನ ನಿಯಮಗಳನ್ನು ಪಾಲಿಸದವರಿಗೆ ಪ್ರಬಂಧ ಬರೆಯುವ ಶಿಕ್ಷೆ ನೀಡಲಾಗುತ್ತದೆ ಎಂದಿದ್ದಾರೆ.
ಗ್ವಾಲಿಯರ್ನ ರೂಪ್ ಚಂದ್ ಸ್ಟೇಡಿಯಂನಲ್ಲಿ ಪ್ರಬಂಧ ಬರೆಸುತ್ತಿದ್ದು, ಶನಿವಾರ ಸುಮಾರು 20 ಮಂದಿಗೆ ಈ ಶಿಕ್ಷೆಯನ್ನು ನೀಡಲಾಗಿದೆ ಎಂದು ಕೌಶಲೇಂದ್ರ ವಿಕ್ರಮ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಗ್ವಾಲಿಯರ್ನಲ್ಲಿ ತುಂಬಾ ಮಂದಿ ನಿಯಮಗಳನ್ನು ಪಾಲಿಸುತ್ತಿಲ್ಲ. ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ. ಮಾಸ್ಕ್ ಕೂಡಾ ಬಳಸುತ್ತಿಲ್ಲ. ಇಂಥವರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಲು ಪ್ರಬಂಧ ಬರೆಯುವ ಶಿಕ್ಷೆ ನೀಡುತ್ತಿದ್ದೇವೆ ಎಂದು ಕೌಶಲೇಂದ್ರ ವಿಕ್ರಮ್ ಸಿಂಗ್ ಹೇಳಿದ್ದಾರೆ.