ಇಂಫಾಲ್: ಹಿಂಸಾಚಾರಪೀಡಿತ ಮಣಿಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಇಲ್ಲಿಯ ಮೋರೆ ಎಂಬ ಗಡಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿಯಾಗಿದೆ. ಗುಡ್ಡಗಾಡು ಪ್ರದೇಶದ ಉಗ್ರಗಾಮಿಗಳು ಏಕಾಏಕಿ ದಾಳಿ ನಡೆಸಿದ್ದು, ಭದ್ರತಾ ಪಡೆ ಪ್ರತಿದಾಳಿ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಸ ವರ್ಷದ ಮೊದಲ ದಿನವೇ ಮಣಿಪುರದಲ್ಲಿ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿತ್ತು. ಇದಾದ ನಂತರ, ತೌಬಾಲ್ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಮತ್ತೆ ಕರ್ಫ್ಯೂ ವಿಧಿಸಲಾಗಿತ್ತು. ತೌಬಲ್ ಜಿಲ್ಲೆಯ ಲಿಲಾಂಗ್ ಪ್ರದೇಶದಲ್ಲಿ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಸ್ಥಳೀಯರ ಮೇಲೆ ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
ಜನವರಿ 2ರಂದು ರಾಜ್ಯದ ಟೆಂಗ್ನೌಪಾಲ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಭಾರಿ ಗುಂಡಿನ ಚಕಮಕಿ ನಡೆದಿತ್ತು. ಗಡಿ ಭದ್ರತಾ ಪಡೆಯ ಸಿಬ್ಬಂದಿ ಸೇರಿ 6 ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿಮಾನದ ಮೂಲಕ ಇಂಫಾಲ್‌ಗೆ ಕರೆದೊಯ್ಯಲಾಗಿತ್ತು. ಇದಕ್ಕೂ ಮೊದಲು, ಡಿಸೆಂಬರ್ 30ರಂದು ಹಗಲು ಹೊತ್ತಿನಲ್ಲಿ ಉಗ್ರರು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದರು. ಓರ್ವ ಪೊಲೀಸ್ ಕಾನ್ಸ್‌ಟೆಬಲ್ ಕಾಲಿಗೆ ಗಾಯವಾಗಿತ್ತು.