ಬನಸ್ಕಾಂಥ್ (ಗುಜರಾತ್): ಗುಜರಾತ್ನಲ್ಲಿ ಬಲಿಷ್ಠವಾಗಿರುವ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ಠಾಕೂರ್ ಸಮಾಜ ತನ್ನ ಸಮುದಾಯದ ಜನರಿಗೆ ಹೊಸ ಸಂಪ್ರದಾಯ ಮತ್ತು ನಿಯಮಗಳನ್ನು ರೂಪಿಸಿದೆ. ಸಾಮೂಹಿಕ ವಿವಾಹ ಆಯೋಜನೆ, ಅವಿವಾಹಿತ ಹೆಣ್ಣು ಮಕ್ಕಳಿಗೆ ಮೊಬೈಲ್ ನಿಷೇಧ ಸೇರಿದಂತೆ ಕೆಲ ಕಟ್ಟುಪಾಡುಗಳನ್ನು ವಿಧಿಸಿದೆ. ಇದನ್ನು ಸಮುದಾಯದ ಎಲ್ಲ ಜನರು ಪಾಲಿಸಬೇಕು ಎಂದು ಕರೆ ನೀಡಿದೆ.
ಬನಸ್ಕಾಂಥ್ ಜಿಲ್ಲೆಯ ಭಾಭಾರ್ ತಾಲೂಕಿನ ಲುನ್ಸೆಲಾದಲ್ಲಿ ಸಂತಶ್ರೀ ಸದಾರಾಮ್ ಬಾಪಾ ಅವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಠಾಕೂರ್ ಸಮಾಜದ ಸದಸ್ಯರು ತಮ್ಮ ಸಮುದಾಯದ ಸಂಪ್ರದಾಯಗಳಿಗೆ ಸುಧಾರಣೆಗಳನ್ನು ತರಲು 11 ಹೊಸ ನಿಯಮಗಳನ್ನು ಪರಿಚಯಿಸಿದರು. ಇವುಗಳ ಪಾಲನೆಯಿಂದ ಸಮಾಜದಲ್ಲಿ ಒಗ್ಗಟ್ಟು ಮತ್ತು ಪಾವಿತ್ರ್ಯತೆ ಉಳಿಸಿಕೊಳ್ಳಲು ಸಾಧ್ಯ ಎಂಬುದು ಸಮಾಜದ ನಿರೀಕ್ಷೆಯಾಗಿದೆ.
ಹೊಸ ನಿಯಮಗಳೇನು?: ಮದುವೆಗಳಲ್ಲಿ ಡಿಜೆಗಳ ಮೇಲೆ ಸಂಪೂರ್ಣ ನಿಷೇಧ, ವಿವಾಹದ ವೇಳೆ ಉಡುಗೊರೆಗಳ ಬದಲಿಗೆ ನಗದು ಹಣವನ್ನೇ ನೀಡುವುದು, ವರ ಮತ್ತು ವಧುವಿಗೆ ದೈನಂದಿನ ಜೀವನಕ್ಕೆ ಉಪಯುಕ್ತವಾದ ಉಡುಗೊರೆಗಳನ್ನು ಮಾತ್ರ ನೀಡಬೇಕು. ನಿಶ್ಚಿತಾರ್ಥ ಮತ್ತು ಸಣ್ಣ ವಿವಾಹಗಳಲ್ಲಿ ಕೇವಲ 11 ಜನರು ಮಾತ್ರ ಹಾಜರಿದ್ದರೆ ಸಾಕು. ದೊಡ್ಡ ಮದುವೆ ಸಮಾರಂಭದಲ್ಲಿ ಕೇವಲ 51 ಜನರಿಗೆ ಅವಕಾಶ ನೀಡುವ ಜೊತೆಗೆ ಸಾಮೂಹಿಕ ವಿವಾಹಗಳನ್ನು ಆಯೋಜಿಸಬೇಕು ಎಂಬುದು ನಿಯಮದಲ್ಲಿದೆ.
ಯುವತಿಯರಿಗೆ ಮೊಬೈಲ್ ನಿಷೇಧ: ವಿಶೇಷವೆಂದರೆ ಹೊಸ ನಿಯಮಗಳಲ್ಲಿ ವಿವಾಹಪೂರ್ವ ಹೆಣ್ಣು ಮಕ್ಕಳು ಮೊಬೈಲ್ ಬಳಕೆ ಮಾಡುವಂತಿಲ್ಲ. ನವವಿವಾಹಿತರು ತಮ್ಮ ಸಂಬಂಧಿಕರ ಭೇಟಿಯ ವೇಳೆ ಹಣವನ್ನು ನೀಡಬೇಖಕಿಲ್ಲ. ಯಾವುದೋ ಕಾರಣಕ್ಕಾಗಿ ನಿಶ್ಚಿತಾರ್ಥ ಮತ್ತು ವಿವಾಹವನ್ನು ರದ್ದುಗೊಳಿಸಿದಲ್ಲಿ ಅಂಥಹ ಪ್ರಕರಣದಲ್ಲಿ ಯಾವುದೇ ಶಿಕ್ಷೆ ನೀಡುವಂತಿಲ್ಲ. ಮಾದಕ ವ್ಯಸನಿಗಳಿಗೆ ವ್ಯಸನಮುಕ್ತ ಶಿಬಿರನ್ನು ಆಯೋಜಿಸಬೇಕು ಎಂದು ನಿಯಮದಲ್ಲಿದೆ.
ಠಾಕೂರ್ ನಿಯಮಗಳಲ್ಲಿ ಶಿಕ್ಷಣದ ಮಹತ್ವವನ್ನು ಸಾರಿದ್ದು, ಹಳ್ಳಿ, ಕುಗ್ರಾಮಗಳಿಂದ ಬೇರೆಡೆಗೆ ಹೋಗಿ ಶಿಕ್ಷಣ ಪಡೆಯುವ ಮಕ್ಕಳಿಗೆ ಸುಲಭ ಪ್ರಯಾಣಕ್ಕಾಗಿ ವ್ಯವಸ್ಥೆ ಮಾಡಬೇಕು. ಸಮಾಜ ಎಲ್ಲ ಸ್ಥರಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ನಿಯಮ ರೂಪಿಸಲಾಗಿದೆ.
ಗುಜರಾತ್‌ನ ವಾವ್ಸೀಟ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಗನಿಬೆನ್ ಠಾಕೂರ್ ಅವರು ಹೊಸದಾಗಿ ರೂಪಿಸಲಾದ ನಿಯಮಗಳನ್ನು ಬಿಡುಗಡೆ ಮಾಡಿದರು. ಕಡಿಮೆ ಅವಧಿಯಲ್ಲಿ ಸೊಸೈಟಿ 40 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿದೆ ಎಂದು ತಿಳಿಸಿದರು. ಈ ಎಲ್ಲ ನಿಯಮಗಳನ್ನು ರೂಪಿಸಲಾಗಿದ್ದರೂ, ಅವುಗಳನ್ನು ಠಾಕೂರ್ ಸಮಾಜದ ಸದಸ್ಯರು ಪಾಲಿಸುತ್ತಾರೋ ಇಲ್ಲವೋ ಎಂಬುದು ಮುಂದಿನ ದಿನಗಳಲ್ಲಿ ಕಂಡುಬರುತ್ತದೆ.
ಓದಿ: ನೋಡಿ ನಂಗೆ ಒಂದೇ ಕಣ್ಣು.: ಕಾರವಾರದಲ್ಲಿ ಒಂದು ಕಣ್ಣಿನ ಅಪರೂಪದ ನಾಗರ ಹಾವು ಪತ್ತೆ