ವಲ್ಸಾದ್ (ಗುಜರಾತ್): ಹೊಸ ಹೇರ್ ಸ್ಟೈಲ್ ಎನ್ನಲಾದ ಫೈರ್ ಹೇರ್ ಕಟ್ ಮಾಡಿಸಲು ಹೋಗಿ ಯುವಕನೋರ್ವ ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿರುವ ಘಟನೆ ಗುಜರಾತ್ನ ವಲ್ಸಾದ್ ಜಿಲ್ಲೆಯಲ್ಲಿ ನಡೆದಿದೆ. ಯುವಕನ ಮುಖ, ಕುತ್ತಿಗೆ ಮತ್ತು ಎದೆ ಭಾಗಕ್ಕೆ ಗಾಯಗಳಾಗಿವೆ.
ಇಲ್ಲಿನ ವಾಪಿ ಪಟ್ಟಣದ ನಿವಾಸಿ ಆರಿಫ್ ಶಾ ಎಂಬ ಯುವಕ ಗಾಯಗೊಂಡಿದ್ದಾನೆ. ಬುಧವಾರ ಬಾಂಟಿ ಸಲೂನ್‌ನಲ್ಲಿ ವಿಚಿತ್ರ ರೀತಿಯ ಫೈರ್ ಹೇರ್ ಕಟ್ ಮಾಡಿಸಲು ಹೋಗಿದ್ದ. ತಲೆಗೆ ರಾಸಾಯನಿಕಗಳನ್ನು ಸಿಂಪಡಿಸಿದ ಕ್ಷೌರಿಕ, ಬೆಂಕಿ ಹಚ್ಚಿದ್ದಾನೆ. ಆದರೆ, ಏಕಾಏಕಿ ಹೊತ್ತಿಕೊಂಡ ಬೆಂಕಿ ನಿಯಂತ್ರಿಸಲು ಸಾಧ್ಯವಾಗದೇ ಇಡೀ ತಲೆಗೆ ಆವರಿಸಿತು. ಪರಿಣಾಮ ಸುಟ್ಟು ಗಾಯಗಳಾಗಿ ಆತ ಖುರ್ಚಿಯಿಂದ ಎದ್ದು ಹೊರಗೆ ಓಡಿ ಹೋಗಿದ್ದಾನೆ.
ಆರಿಫ್ ಶಾ ಹೊಸ ಹೇರ್ ಸ್ಟೈಲ್ ಮಾಡಿಸುತ್ತಿದ್ದರಿಂದ ಆತನ ಜೊತೆಗಿದ್ದ ಸ್ನೇಹಿತ ಮೊಬೈಲ್ನಲ್ಲಿ ವಿಡಿಯೋ ಸೆರೆಹಿಡಿದಿದ್ದಾನೆ. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಾಪಿ ಟೌನ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಯೂರಿಬೆನ್ ಪ್ರತಿಕ್ರಿಯಿಸಿ, ವಾಪಿ ನಿವಾಸಿ ಆರಿಫ್ ಶಾ ಎಂಬಾತ ಸುಟ್ಟ ಗಾಯಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವಲ್ಸಾದ್ ಸರ್ಕಾರಿ ಆಸ್ಪತ್ರೆಯವರು ಠಾಣೆಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸೂರತ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.
ಸಲೂನ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಾಥಮಿಕ ಮಾಹಿತಿ ಕಲೆ ಹಾಕಲಾಗಿದೆ. ಆರಿಫ್ ಶಾ ಹಾಗೂ ಆತನ ಸ್ನೇಹಿತ ಸಾಮಾಜಿಕ ಜಾಲತಾಣಗಳಲ್ಲಿದ್ದ ಸಕ್ರಿಯವಾಗಿದ್ದರು. ಈ ಫೈರ್ ಹೇರ್ ಕಟ್ ವಿಡಿಯೋವನ್ನು ಆತನ ಸ್ನೇಹಿತ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲೆಂದು ಚಿತ್ರೀಕರಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಗಾಯಾಳು, ಕ್ಷೌರಿಕ ಮತ್ತು ಘಟನೆ ನಡೆದ ಸಮಯದಲ್ಲಿ ಸಲೂನ್‌ನಲ್ಲಿದ್ದ ಎಲ್ಲರ ಹೇಳಿಕೆಯನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಫೈರ್ ಹೇರ್ ಕಟ್ ಹೊಸ ಟ್ರೆಂಡ್ ಆಗಿದೆ. ಅದರಲ್ಲೂ ವಿಶೇಷವಾಗಿ ಉದ್ದನೆಯ ಕೂದಲು ಹೊಂದಿರುವ ಯುವಕರು ಮತ್ತು ಮಹಿಳೆಯರು ಹೊಸ ಹೇರ್ ಸ್ಟೈಲ್ ಮಾಡಿಸಿಕೊಳ್ಳುತ್ತಾರೆ. ಕ್ಷೌರಿಕ ಮೊದಲು ಕೂದಲಿಗೆ ಸುಡುವ ರಾಸಾಯನಿಕ ಪುಡಿಯನ್ನು ಸಿಂಪಡಿಸಿ, ಅದಕ್ಕೆ ಬೆಂಕಿ ಹಚ್ಚುತ್ತಾನೆ. ನಂತರ ಕತ್ತರಿಯಿಂದ ಕೂದಲು ಕತ್ತರಿಸುವುದೇ ಈ ಫೈರ್ ಹೇರ್ ಕಟ್. ಇಂಥ ಹೇರ್ ಕಟ್ ಮಾಡಿಸಿಕೊಳ್ಳುವುದಕ್ಕೂ ಮುನ್ನ ನೀವು ಅಪಾಯವನ್ನು ತಿಳಿದುಕೊಳ್ಳಿ.
ಇದನ್ನೂ ಓದಿ: ಹೊಟ್ಟೆಯಲ್ಲಿ ಸ್ಪಾಂಜ್ ಬಿಟ್ಟು ಹೊಲಿಗೆ: 15 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ