ಅಹಮದಾಬಾದ್ (ಗುಜರಾತ್): ಗುಜರಾತ್ ವಿಶ್ವವಿದ್ಯಾನಿಲಯದ ಮಾನಹಾನಿ ಪ್ರಕರಣದಲ್ಲಿ ಹಾಜರಾಗುವುದನ್ನು ತಪ್ಪಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಮಾನನಷ್ಟ ಮೊಕದ್ದಮೆಯಲ್ಲಿ ಅಹಮದಾಬಾದ್‌ನ ಮೆಟ್ರೋಪಾಲಿಟನ್ ನ್ಯಾಯಾಲಯವು ಆಮ್ ಆದ್ಮಿಯ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷದ ಸಂಸದ ಸಂಜಯ್ ಸಿಂಗ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಅದರಂತೆ ಇಬ್ಬರೂ ನಾಯಕರು ಆಗಸ್ಟ್ 11ರಂದು ಅಹಮದಾಬಾದ್ ಹೈಕೋರ್ಟ್‌ಗೆ ಹಾಜರಾಗಬೇಕಿದೆ.
ಮೆಟ್ರೋಪಾಲಿಟನ್ ನ್ಯಾಯಾಲಯದ ಸಮನ್ಸ್ ವಿರುದ್ಧ ಕೇಜ್ರಿವಾಲ್ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅದನ್ನು ತಿರಸ್ಕರಿಸಿದೆ. ಸಮನ್ಸ್ ಜಾರಿ ಹಿನ್ನೆಲೆ ಕೋರ್ಟ್‌ಗೆ ಹಾಜರಾಗಲು ಅರವಿಂದ್ ಕೇಜ್ರಿವಾಲ್ ಮೇಲೆ ಒತ್ತಡ ಹೆಚ್ಚಿದೆ. ಗುಜರಾತ್ ವಿವಿ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಮಧ್ಯಂತರ ಪರಿಹಾರ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಹಮದಾಬಾದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಇಂದು ವಿಚಾರಣೆ ನಡೆಯಿತು. ಆದರೆ, ವಿಚಾರಣೆ ವೇಳೆ ಸೆಷನ್ಸ್ ಕೋರ್ಟ್ ಕೇಜ್ರಿವಾಲ್‌ಗೆ ಯಾವುದೇ ಪರಿಹಾರ ನೀಡಲು ನಿರಾಕರಿಸಿತು.
ಆಗಸ್ಟ್ 8 ರಂದು ನಾವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಗುಜರಾತ್ ಲೀಗಲ್ ಸೆಲ್ ಮುಖ್ಯಸ್ಥ ಪ್ರಣವ್ ಠಕ್ಕರ್ ಹೇಳಿದ್ದರು. ಪ್ರಧಾನಿ ಮೋದಿ ಪದವಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದಾರೆ. ಇವರಲ್ಲದೆ ಪಕ್ಷದ ಸಂಸದ ಸಂಜಯ್ ಸಿಂಗ್ ಕೂಡ ಭಾಗಿಯಾಗಿದ್ದಾರೆ.
ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶದ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯವು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಪ್ರಧಾನಿ ಮೋದಿ ಪದವಿ ಬಗ್ಗೆ ಮಾಹಿತಿ ನೀಡುವಂತೆ ಸಿಐಸಿ ಗುಜರಾತ್ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು. ಸುದೀರ್ಘ ವಿಚಾರಣೆಯ ನಂತರ ಗುಜರಾತ್ ಹೈಕೋರ್ಟ್ ಈ ವರ್ಷದ ಮಾರ್ಚ್ 31 ರಂದು ಸಿಐಸಿಯ ಆದೇಶವನ್ನು ತಳ್ಳಿಹಾಕಿತು. ಪ್ರಧಾನಿ ಪದವಿ ವಿಷಯವನ್ನು ಎತ್ತಿದ್ದಕ್ಕಾಗಿ ಕೇಜ್ರಿವಾಲ್ ಅವರಿಗೆ ದಂಡ ವಿಧಿಸಿತ್ತು. ಅರವಿಂದ್ ಕೇಜ್ರಿವಾಲ್ ಕೂಡ ಹೈಕೋರ್ಟ್ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ಅಹಮದಾಬಾದ್ ನ್ಯಾಯಾಲಯದಲ್ಲಿ ಅರ್ಜಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದಂತೆ ಮೆಟ್ರೋ ಕೋರ್ಟ್‌ನಲ್ಲಿ ಗುಜರಾತ್ ವಿಶ್ವವಿದ್ಯಾಲಯ ಮಾನನಷ್ಟ ಮೊಕದ್ದಮೆ ಹೂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ನೀಡಿರುವ ಸಮನ್ಸ್ ಅನ್ನು ರದ್ದುಗೊಳಿಸುವಂತೆ ಅರವಿಂದ್ ಕೇಜ್ರಿವಾಲ್ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸೆಷನ್ಸ್ ನ್ಯಾಯಾಲಯ ಯಾವುದೇ ಪರಿಹಾರ ನೀಡಲಿಲ್ಲ.
ಮೆಟ್ರೋ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ: ಇಡೀ ಪ್ರಕರಣದ ವಿಚಾರಣೆ ಗುಜರಾತ್ ಹೈಕೋರ್ಟ್‌ನಲ್ಲಿ ನಡೆದಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಪದವಿಯನ್ನು ಗುಜರಾತ್ ಹೈಕೋರ್ಟ್ ಘೋಷಿಸುವ ಅಗತ್ಯವಿಲ್ಲ. ಹೀಗಾಗಿ ತಡೆಯಾಜ್ಞೆ ಜಾರಿಗೊಳಿಸುವ ಮೂಲಕ ಪ್ರಕರಣ ಇತ್ಯರ್ಥಪಡಿಸಿತು.
ವಿಶ್ವವಿದ್ಯಾನಿಲಯದ ಗೌರವಕ್ಕೆ ಧಕ್ಕೆ ತರುವಂತಹ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪಿಯೂಷ್ ಪಟೇಲ್ ಅವರು ಅಹಮದಾಬಾದ್‌ನಲ್ಲಿ ಕೇಜ್ರಿವಾಲ್ ಮತ್ತು ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಧಾನಿ ಮೋದಿ ಅವರ ಪದವಿ ವಿವಾದಕ್ಕೆ ಸಂಬಂಧಿಸಿದ ಈ ವಿಷಯವು ತುಂಬಾ ಜಟಿಲವಾಗಿದೆ.
ಓದಿ: ಎಲ್ಲ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಿರುವ ಕುರಿತು ವಿವರಣೆ ನೀಡಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ