ಗಾಂಧಿನಗರ, ಗುಜರಾತ್: ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್ ಮುಂದುವರೆಯುತ್ತಿದೆ. ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸುವ ಸಲುವಾಗಿ ಎಲ್ಲಾ ರಾಜ್ಯಗಳು ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೆಲವೊಂದು ರಾಜ್ಯಗಳಲ್ಲಿ ಲಸಿಕೆ ಕಾರ್ಯಕ್ರಮ ನಿರೀಕ್ಷೆಯಷ್ಟು ಯಶಸ್ಸು ಕಾಣುತ್ತಿಲ್ಲ.
ಯಾವುದೇ ರಾಜ್ಯಕ್ಕೆ ಹೋದರೂ ಕೂಡಾ ಲಸಿಕೆ ಕೊರತೆ, ಲಸಿಕೆ ತೆಗೆದುಕೊಳ್ಳುವ ಪ್ರದೇಶದಲ್ಲಿ ಉದ್ದದ ಸರತಿ ಸಾಲುಗಳು ಕಂಡುಬರುತ್ತವೆ. ಆದರೆ ಗುಜರಾತ್ನ ಕಚ್ನಲ್ಲಿ ಈ ರೀತಿಯ ಸನ್ನಿವೇಶ ಕಾಣಲು ಸಾಧ್ಯವಿಲ್ಲ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಒಮ್ಮೆ ಹೇಳಿದ್ದರು.
ಅಮಿತಾಬ್ ಬಚ್ಚನ್ ಹೀಗೆ ಹೇಳಿದ್ದೇಕೆ..?
ಯಾವುದೇ ರಾಜ್ಯಕ್ಕೆ ಹೋದರೂ ವ್ಯಾಕ್ಸಿನೇಷನ್ ಕೇಂದ್ರದ ಮುಂದೆ ಸರತಿ ಸಾಲು ಕಾಯಂ. ಒಮ್ಮೊಮ್ಮೆ ವ್ಯಾಕ್ಸಿನ್ ಖಾಲಿಯಾಗುವ ಸಂದರ್ಭಗಳು ಬಂದೊದಗುತ್ತವೆ. ಆದರೆ ಕಚ್ ಜಿಲ್ಲೆಯ ಭುಜ್ನಲ್ಲಿ ವ್ಯಾಕ್ಸಿನೇಷನ್ ಮಾಡಲು ಹೊಸ ಮಾರ್ಗ ಕಂಡುಕೊಳ್ಳಲಾಗಿದೆ.
ಭುಜ್ನ ಆರ್ಡಿ ವರ್ಸಾನಿ ಹೈಸ್ಕೂಲ್ ಗ್ರೌಂಡಿನಲ್ಲಿ ವ್ಯಾಕ್ಸಿನೇಷನ್ಗೆ ವ್ಯವಸ್ಥೆ ಮಾಡಲಾಗಿದೆ. ಕೋವಿನ್ ವೆಬ್ಸೈಟ್ ಅಥವಾ ಆರೋಗ್ಯ ಸೇತು ಅಪ್ಲಿಕೇಷನ್ನಲ್ಲಿ ನೋಂದಾಯಿಸಿಕೊಂಡವರಿಗೆ ಇಲ್ಲಿ ವ್ಯಾಕ್ಸಿನೇಷನ್ ಮಾಡಲಾಗುತ್ತದೆ.
ಇದನ್ನೂ ಓದಿ: ಕೋವಿಡ್ ಪೀಡಿತರಿಗೆ ರಾಜ್ಯ ಸರ್ಕಾರದ ಶಾಕ್: ಚಿಕಿತ್ಸಾ ವೆಚ್ಚ ಹೆಚ್ಚಿಸಿ ಆದೇಶ
ವಾಹನಗಳಲ್ಲಿ ಬರುವವರಿಗೆ ವಾಹನಗಳಲ್ಲೇ ವ್ಯಾಕ್ಸಿನೇಷನ್ ಮಾಡಲಾಗುತ್ತದೆ. ಸಾಮಾಜಿಕ ಅಂತರ ಮತ್ತು ಉದ್ದದ ಸರತಿ ಸಾಲುಗಳು ಸೃಷ್ಟಿಯಾಗುವ ಪ್ರಮೇಯವೇ ಇರುವುದಿಲ್ಲ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಲಸಿಕೆಯಿಂದ ಏನಾದರೂ ಆರೋಗ್ಯ ಸಮಸ್ಯೆ ಉಂಟಾಗುತ್ತದೆಯೇ ಎಂಬುದನ್ನು ಗಮನಿಸಲು ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಅರ್ಧ ಗಂಟೆ ಕಾದ ನಂತರ ಯಾರಿಗಾದರೂ ಜ್ವರ ಬಂದರೆ ಅಂಥವರಿಗೆ ಔಷಧಿ ನೀಡಿ ಕಳಿಸಲಾಗುತ್ತದೆ.
ಎರಡು ಬ್ಯಾಚ್ನಲ್ಲಿ ಲಸಿಕೆ..!
18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ಹಾಕಲಾಗುತ್ತದೆ. ಬೆಳಗ್ಗೆ 8ರಿಂದ 11ರವರೆಗೆ ಮತ್ತು ಸಂಜೆ 4ರಿಂದ 7ರವರೆಗೆ ಎರಡು ಬ್ಯಾಚ್‌ಗಳಲ್ಲಿ ವ್ಯಾಕ್ಸಿನೇಷನ್ ಮಾಡಲಾಗುತ್ತದೆ. ಒಂದು ಸ್ಲಾಟ್ನಲ್ಲಿ 100 ಮಂದಿಗೆ ಲಸಿಕೆ ಹಾಕಲಾಗುತ್ತದೆ. ಅಂದರೆ ಎರಡು ಬ್ಯಾಚ್ನಲ್ಲಿ ಒಟ್ಟು 200 ಮಂದಿಗೆ ವ್ಯಾಕ್ಸಿನೇಷನ್ ಹಾಕಲಾಗುತ್ತದೆ.