ಪಾಲನ್‌ಪುರ(ಗುಜರಾತ್): ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿಯನ್ನು ಅಸ್ಸೋಂ ಪೊಲೀಸರು ಬಂಧಿಸಿರುವ ಬೆನ್ನಲ್ಲೇ ಗುಜರಾತ್ ರಾಜಕೀಯದಲ್ಲಿ ಸಂಚಲನ ಅಲೆ ಎಬ್ಬಿದೆ. ಮೇವಾನಿಯನ್ನು ಬುಧವಾರ ತಡರಾತ್ರಿ 11.30ಕ್ಕೆ ಪಾಲನ್‌ಪುರ ಸರ್ಕ್ಯೂಟ್ ಹೌಸ್‌ನಿಂದ ಅಸ್ಸೋಂ ಪೊಲೀಸರು ಬಂಧಿಸಿದ್ದಾರೆ. ಜಿಗ್ನೇಶ್ ಮೇವಾನಿ ವಿರುದ್ಧ ಅಸ್ಸೋಂನಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಪೊಲೀಸರು ಇನ್ನೂ ಎಫ್‌ಐಆರ್ ಪ್ರತಿಯನ್ನು ನೀಡಿಲ್ಲ ಎನ್ನಲಾಗ್ತಿದೆ. ಯಾವ ಪ್ರಕರಣದಲ್ಲಿ ಮೇವಾನಿ ಅವರನ್ನು ಬಂಧಿಸಲಾಗಿದೆ ಎಂಬುದು ತಿಳಿದು ಬರಬೇಕಾಗಿದೆ.
ಯಾವುದೋ ಟ್ವೀಟ್‌ಗೆ ಸಂಬಂಧಿಸಿದಂತೆ ನನ್ನನ್ನು ಬಂಧಿಸಿದ್ದಾರೆ: ಕೆಲವು ಪ್ರಕರಣಗಳ ಕುರಿತು ಅಸ್ಸೋಂ ಪೊಲೀಸರು ಮೇವಾನಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ನನ್ನ ಯಾವುದೋ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ನನ್ನನ್ನು ಬಂಧಿಸಲಾಗಿದೆ. ಆದರೆ, ಪೊಲೀಸರು ನನಗೆ ಯಾವುದೇ ನಿರ್ದಿಷ್ಟ ಮಾಹಿತಿ ನೀಡಿಲ್ಲ. ಯಾವುದೇ ಸುಳ್ಳು ದೂರಿಗೆ ನಾನು ಹೆದರುವುದಿಲ್ಲ. ನನ್ನ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಮೇವಾನಿ ಹೇಳಿದ್ದಾರೆ.
ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾ, ಪರೀಕ್ಷೆ ಬರೆಯಲು ಅನುಮತಿಸಿ
ಇಂತಹ ದೂರುಗಳಿಗೆ ಜಿಗ್ನೇಶ್ ಅಥವಾ ಕಾಂಗ್ರೆಸ್ ಹೆದರುವುದಿಲ್ಲ: ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಗದೀಶ್ ಠಾಕೂರ್ ಸೇರಿದಂತೆ ಶಾಸಕರು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರತಿಭಟಿಸಿದರು. ಜಿಗ್ನೇಶ್ರನ್ನು ಬೆಂಬಲಿಸಿ ಮತ್ತು ಅಸ್ಸೋಂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೇವಾನಿ ಬಂಧನಕ್ಕೆ ಸಂಬಂಧಿಸಿದಂತೆ ಜಗದೀಶ್ ಠಾಕೂರ್ ಮಾತನಾಡಿ, ಆರ್‌ಎಸ್‌ಎಸ್ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ಜಿಗ್ನೇಶ್ ವಿರುದ್ಧ ದೂರು ದಾಖಲಿಸಲಾಗಿದೆ. ಹಣದ ಮೇಲೆ ನಂಬಿಕೆ ಇಲ್ಲದ ಶಾಸಕರೊಬ್ಬರ ಮೇಲೆ ಸುಳ್ಳು ದೂರು ನೀಡಿ ಬೆದರಿಸುವ ಪ್ರಯತ್ನ ಇದಾಗಿದೆ. ಇಂತಹ ದೂರುಗಳಿಗೆ ಜಿಗ್ನೇಶ್ ಅಥವಾ ಕಾಂಗ್ರೆಸ್ ಹೆದರುವುದಿಲ್ಲ. ನಮ್ಮ ಕಾನೂನು ತಂಡ ಜಿಗ್ನೇಶ್ ಪರ ಹೋರಾಟ ನಡೆಸಿ ಬಿಡುಗಡೆ ಮಾಡಲಿದೆ ಎಂದರು.
ಟ್ವೀಟ್ ಪ್ರಕರಣದಲ್ಲಿ ದೂರು ದಾಖಲು: ಟ್ವೀಟ್ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಮೇವಾನಿ ಪರ ವಕೀಲ ಪರೇಶ್ ವಘೇಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಿಆರ್‌ಪಿಸಿ 80 ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಗಿದೆ. ಶಾಸಕರನ್ನು ವಶಕ್ಕೆ ತೆಗೆದುಕೊಳ್ಳುವ ಮೊದಲು ಅನುಮತಿ ಪಡೆಯಲಾಗಿದೆ ಎಂದು ನಮಗೆ ಹೇಳಿಲ್ಲ ಎಂದು ತಿಳಿಸಿದರು.
ಓದಿ: ಮೆಟ್ರೋ ಕಾಮಗಾರಿ: ಮರಗಳನ್ನು ಕಡಿಯಲು ಸಮ್ಮತಿ ನೀಡಿದ ಹೈಕೋರ್ಟ್
ಏನಿದು ಘಟನೆ: ಅಸ್ಸೋಂನ ಪೊಲೀಸರು ಈ ವಿಷಯದ ಬಗ್ಗೆ ಬಾಯಿ ಬಿಡದಿದ್ದರೂ, ಅನುಪ್ ಕುಮಾರ್ ದೇ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ವಿರುದ್ಧ ಮೆವಾನಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ ಎಂದು ಅನುಪ್ ಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ. ಅನುಪ್ ಕುಮಾರ್ ದೂರಿನಲ್ಲಿ ಕೆಲವು ದಿನಗಳ ಹಿಂದೆ ಹಂಚಿಕೊಂಡ ಮೇವಾನಿ ಟ್ವೀಟ್ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಸಂಚು, ಸಮುದಾಯವನ್ನು ಅವಮಾನಿಸುವುದು, ಶಾಂತಿಯ ವಾತಾವರಣವನ್ನು ಕದಡುವಂತಿದೆ ಎಂದು ಆರೋಪಿಸಿದ್ದರು. ಹೀಗಾಗಿ ಅಸ್ಸೋಂ ಪೊಲೀಸರು ಜಿಗ್ನೇಶ್ ಮೇವಾನಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದರು.
ಅಸ್ಸೋಂ ಪೊಲೀಸರು ಜಿಗ್ನೇಶ್ ಮೇವಾನಿಯನ್ನು ಅಹಮದಾಬಾದ್ಗೆ ಕರೆದೊಯ್ದಿದ್ದು, ಅಲ್ಲಿಂದ ಪೊಲೀಸರು ಅವರನ್ನು ರೈಲಿನಲ್ಲಿ ಗುವಾಹಟಿಗೆ ಕರೆದೊಯ್ಯಲಿದ್ದಾರೆ.