ಪಾಲನ್ಪುರ್(ಗುಜರಾತ್): 60 ಲಕ್ಷ ರೂಪಾಯಿಗಳ ಇನ್ಸುರೆನ್ಸ್ ಹಣವನ್ನು ಪಡೆಯುವ ಸಲುವಾಗಿ ಚಾರ್ಟೆಡ್ ಅಕೌಂಟೆಂಟ್, ತನ್ನ ಪತ್ನಿಯನ್ನು ಅಪಘಾತದ ಮೂಲಕ ಕೊಲೆ ಮಾಡಿಸಿರುವ ದಾರುಣ ಘಟನೆ ಗುಜರಾತ್ನ ಬನಸ್ಕಂತ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಕಳೆದ ವರ್ಷ ಡಿಸೆಂಬರ್ 26 ರಂದು ರಸ್ತೆ ಅಪಘಾತದಲ್ಲಿ ದಕ್ಷಬೆನ್ ಎಂದು ಗುರುತಿಸಲ್ಪಟ್ಟ ಮಹಿಳೆ ಸಾವನ್ನಪ್ಪಿದ್ದು, ಭಿಲ್ಡಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
"ಮಹಿಳೆಯ ಸಂಬಂಧಿಕರು ಸಾವಿನ ಬಗ್ಗೆ ಕೆಲವು ಅನುಮಾನ ವ್ಯಕ್ತಪಡಿಸಿದ್ದರಿಂದ ನಾವು ಆಳವಾದ ತನಿಖೆ ಪ್ರಾರಂಭಿಸಿದೆವು. ನಂತರ ಸಿಸಿಟಿವಿ ಮತ್ತು ಮಹಿಳೆಯ ಪತಿಯ ಫೋನ್ ಕರೆಗಳನ್ನು ಪರಿಶೀಲಿಸಿದಾಗ, ಆ ಮಹಿಳೆ ಕೊಲೆಯಾಗಿದ್ದಾಳೆ ಎಂಬುದು ಬೆಳಕಿಗೆ ಬಂದಿತು " ಎಂದು ಅವರು ತಿಳಿಸಿದ್ದಾರೆ.
"ಆಕೆಯ ಗಂಡ ಲಲಿತ್ ಟಾಂಕ್, ಕಿರಿತ್ ಮಲಿ ಎಂಬಾತನಿಗೆ 2 ಲಕ್ಷ ರೂಪಾಯಿ ಸುಪಾರಿ ನೀಡಿ, ರಸ್ತೆಯಲ್ಲಿ ಅಪಘಾತ ಮಾಡಿ ಆಕಸ್ಮಿಕ ಸಾವು ಎಂದು ಬಿಂಬಿಸುವಂತೆ ತಿಳಿಸಿದ್ದಾನೆ. ಲಲಿತ್ ತನ್ನ ಪತ್ನಿಯ ಹೆಸರಲ್ಲಿ 3 ತಿಂಗಳ ಹಿಂದೆ 60 ಲಕ್ಷ ವಿಮೆ ಮಾಡಿಸಿದ್ದು, ಆ ಹಣವನ್ನು ಪಡೆದುಕೊಳ್ಳುವ ಸಲುವಾಗಿ ಈ ದುಷ್ಕೃತ್ಯ ಎಸೆಗಿದ್ದಾನೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಡಿಸೆಂಬರ್ 26ರ ಬೆಳಗ್ಗೆ ಲಲಿತ್ ತನ್ನ ಪತ್ನಿಯನ್ನು ದೇವಸ್ಥಾನಕ್ಕೆಂದು ಕರೆದೊಯ್ದಿದ್ದಾನೆ. ಚಾಲಕನಿಗೆ ತಾವಿರುವ ಸ್ಥಳದ ಮಾಹಿತಿಯನ್ನು ಶೇರ್ ಮಾಡಿದ್ದು, ದಾರಿಯಲ್ಲಿ ನಡೆದು ಹೋಗುವಾಗ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದಾನೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ವಾಹನ ದಕ್ಷಬೆನ್ಗೆ ಗುದ್ದಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತನಿಖೆ ನಡೆಸಿದ ಅಧಿಕಾರಿ ತಿಳಿಸಿದ್ದಾರೆ.
ಶುಕ್ರವಾರ ಲಲಿತ್ನನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದವರ ಬಂಧನಕ್ಕೂ ಬಲೆ ಬೀಸಿದ್ದಾರೆ.