ಅಹಮದಾಬಾದ್: ದೇಶವನ್ನು ಬೆಚ್ಚಿಬೀಳಿಸಿದ ಮೊರ್ಬಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ. ಗುಜರಾತ್ನ ಅಹಮದಾಬಾದ್ನ ಮೊರ್ಬಿ ಸೇತುವೆ ಕುಸಿತದಿಂದಾಗಿ 135 ಜನರು ಪ್ರಾಣ ಕಳೆದುಕೊಂಡಿದ್ದರು. ಅಲ್ಲದೇ ಘಟನೆಯಿಂದಾಗಿ 56 ಮಂದಿ ಗಾಯಗೊಂಡಿದ್ದರು. ಮೊರ್ಬಿ ಪ್ರದೇಶದಲ್ಲಿ ಮಾತ್ರವಲ್ಲದೇ, ಇಡೀ ಗುಜರಾತ್ ಈ ಘಟನೆಯಿಂದ ಮರ ಮರುಗಿತ್ತು.
ಘಟನೆ ಸಂಬಂಧ ಒರೆವಾ ಗ್ರೂಪ್ನ ಇಬ್ಬರು ಮ್ಯಾನೇಜರ್ಗಳಾದ ದಿನೇಶ್ ದಾವೆ ಮತ್ತು ದೀಪಕ್ ಪರೇಖ್ ಸೇರಿದಂತೆ ಒಟ್ಟು 7 ಮಂದಿ ಈ ಪ್ರಕರಣದ ಆರೋಪಿಗಳಾಗಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ತಮಗೆ ಜಾಮೀನು ನೀಡುವಂತೆ ಕೋರಿ ಆರೋಪಿಹಳೆಲ್ಲರೂ ಗುಜರಾತ್ ಹೈಕೋರ್ಟ್ನ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಜಾಮೀನು ನೀಡಲು ನಿರಾಕರಿಸಿದೆ. ಇಂತಹ ಗಂಭೀರ ಅಪರಾಧ ಮಾಡಿದ ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಗುಜರಾತ್ ಉಚ್ಛ ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.
7 ಆರೋಪಿಗಳ ಬಂಧನ: ಒರೆವಾ ಗ್ರೂಪ್ನ ಇಬ್ಬರು ಮ್ಯಾನೇಜರ್ ಗಳಾದ ದಿನೇಶ್ ದಾವೆ, ದೀಪಕ್ ಪರೇಕ್, ಜೊತೆಗೆ ಟಿಕೆಟ್ ಬುಕ್ಕಿಂಗ್ ಕ್ಲರ್ಕ್ ಮತ್ತು ಸೆಕ್ಯೂರಿಟಿ ಗಾರ್ಡ್ ಮನ್ಸುಕ್ ತೊಪಿಯಾ, ಮಹದೇವ್ ಸೊಳಂಕಿ, ಅಲ್ಪೇಶ್ ಗೊಹ್ಲಿ, ದೀಲಿಪ್, ಮುಕೇಶ್ ಚೌಹಣ್ ಜಾಮೀನು ಕೋರಿ ಗುಜರಾತ್ನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಆರೋಪಿಗಳು ಜಾಮೀನು ಕೋರಿ ಮೊರ್ಬಿ ಸೆಷನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಲ್ಲಿ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಆರೋಪಿಗಳು ಗುಜರಾತ್ನ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಗುಜರಾತ್ ಸರ್ಕಾರದಿಂದಲೂ ವಿರೋಧ: ಗುಜರಾತ್ ಸರ್ಕಾರ ಕೂಡ ಆರೋಪಿಗಳಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಇದು ಗಂಭೀರ ರೀತಿಯ ಪ್ರಕರಣವಾಗಿದ್ದು, ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಹಲವು ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಆರೋಪಿಗಳ ಬೇಜವಾಬ್ದಾರಿಯಿಂದಾಗಿ ಈ ಘಟನೆ ನಡೆದಿದೆ. ದುರಂತದಲ್ಲಿ 56ಕ್ಕೂ ಹೆಚ್ಚು ಮಂದಿ ಗಾಯಗೊಂಡು ಇನ್ನೂ ನರಳುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಜಾಮೀನು ನೀಡದಂತೆ ಗುಜರಾತ್ ಸರ್ಕಾರದ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಮುಂದುವರಿದ ತನಿಖೆ: ಘಟನೆ ಸಂಬಂದ ಸರ್ಕಾರ ಇನ್ನು ತನಿಖೆ ಮುಂದುವರೆದಿದೆ. ತನಿಖೆ ನಿರ್ಣಾಯಕ ಹಂತದಲ್ಲಿದೆ. ಈ ಪರಿಸ್ಥಿತಿಯಲ್ಲಿ ಆರೋಪಿಗಳಿಗೆ ಜಾಮೀನು ನೀಡಬಾರದು. ಅವರಿಗೆ ಜಾಮೀನು ನೀಡಿದರೆ, ಅವರು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಈ ಹಿನ್ನಲೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಸರ್ಕಾರದ ಪರ ವಕೀಲರು ತಮ್ಮ ವಾದ ಮಂಡಿಸಿದ್ದಾರೆ.
143 ವರ್ಷಗಳಷ್ಟುಹಳೆಯ ಸೇತುವೆ ನವೀಕರಣ ಮಾಡಿದ ಒರೆವಾ ಕಂಪನಿ, ಸೇತುವೆ ದುರಸ್ತಿ ಆಗಿರಿವುದನ್ನು ಪರಿಶೀಲನೆ ನಡೆಸದೇ ಒಂದೇ ಬಾರಿಗೆ ಸೇತುವೆ ಮೇಲೆ ಭಾರೀ ಪ್ರಮಾಣದ ಜನರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಈ ದುರ್ಘಟನೆ ನಡೆದಿದೆ. ಸೇತುವೆಗೆ ಜನರನ್ನು ಬಿಡುವ ಮೊದಲು ಅದರ ಸಾಮರ್ಥ್ಯವನ್ನು ಕಂಪನಿ ಇಂಜಿನಿಯರ್ಗಳು ಪರಿಶೀಲನೆ ನಡೆಸಬೇಕಾಗಿತ್ತು. ಆದರೆ ಸೇತುವೆ ಹೊಣೆ ಹೊತ್ತ ಒರೆವಾ ಕಂಪನಿ ಇದ್ಯಾವುದನ್ನೂ ಮಾಡಿರಲಿಲ್ಲ ಎಂಬ ಆರೋಪಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಕೃತಕ ಗರ್ಭಧಾರಣೆ ವಯೋಮಿತಿ ಮರುಪರಿಶೀಲಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ಸೂಚನೆ