ನವದೆಹಲಿ: ಗುಜರಾತ್‌ನ ಪ್ರಸಿದ್ಧ ಸಾಂಪ್ರದಾಯಿಕ ನೃತ್ಯ ಪ್ರಕಾರವಾದ ಗರ್ಬಾ ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ ಸೇರಲು ನಾಮನಿರ್ದೇಶನಗೊಂಡಿದೆ.
ಕಳೆದ ಡಿಸೆಂಬರ್‌ನಲ್ಲಿ ಕೋಲ್ಕತ್ತಾದ ದುರ್ಗಾ ಪೂಜಾ ಉತ್ಸವಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಾನಮಾನ ನೀಡಿರುವುದಾಗಿ ಘೋಷಿಸಿತ್ತು. ಈ ಮೂಲಕ ಭಾರತದ 14 ವಿಶೇಷ ಆಚರಣೆಗಳಿಗೆ ಯುನೆಸ್ಕೋದ ಅಮೂರ್ತ ಪರಂಪರೆಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಂತಾಗಿದೆ. ಇದೀಗ ಗರ್ಬಾ ನೃತ್ಯವೂ ಸಹ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ನಾಮ ನಿರ್ದೇಶನಗೊಂಡಿದೆ ಎಂದು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಕಾರ್ಯದರ್ಶಿ ಟಿಮ್ ಕರ್ಟಿಸ್ ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ನಲ್ಲಿ 'ಗರ್ಬಾ'ಕ್ಕೆ ನಿರ್ಬಂಧ, ರಾಜಕೀಯ ರ್ಯಾಲಿಗಳಿಗೆ ಅನುಮತಿ: ಕೋರ್ಟ್ ಮೊರೆ ಹೋದ ಸಂಘಟಕರು
ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ನಾಮನಿರ್ದೇಶನಗೊಂಡ ಆಚರಣೆಗಳನ್ನು ಮುಂದಿನ ವರ್ಷಕ್ಕೆ ಪರಿಗಣಿಸಲಾಗುವುದು. ನಾಮ ನಿರ್ದೇಶನದ ಕಡತಗಳನ್ನು ಮೌಲ್ಯಮಾಪನ ಸಂಸ್ಥೆಯು 2023 ರ ಮಧ್ಯದಲ್ಲಿ ಪರಿಶೀಲಿಸುತ್ತದೆ ಮತ್ತು ಮುಂದಿನ ವರ್ಷದ ಅಂತ್ಯದ ವೇಳೆಗೆ ಸಮಿತಿಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯನ್ನು ನಿರ್ಧರಿಸುತ್ತದೆ. ಯುನೆಸ್ಕೋ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ಕರ್ಟಿಸ್ ತಿಳಿಸಿದರು.
ರಾಮಲೀಲಾ, ವೇದ ಪಠಣಗಳು, ಕುಂಭಮೇಳ, ಕೋಲ್ಕತ್ತಾದ ದುರ್ಗಾ ಪೂಜೆ ಸೇರಿದಂತೆ ಭಾರತದ 14 ವಿಶೇಷ ಆಚರಣೆಗಳಿಗೆ ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಾನಮಾನ ದೊರೆಕಿದೆ.
ಇದನ್ನೂ ಓದಿ: ನಾಗರ ಹಾವಿನೊಂದಿಗೆ ಯುವತಿಯರ ಗಾರ್ಬಾ ಡ್ಯಾನ್ಸ್! ವಿಡಿಯೋ ವೈರಲ್...