ಗಾಂಧಿನಗರ : ಗುಜರಾತ್ನ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟು ಸತತ ಮೂರನೇ ದಿನವೂ ಉಕ್ಕಿ ಹರಿಯುತ್ತಿದೆ. ಇಂದು ಬೆಳಗ್ಗೆ ವೇಳೆಗೆ ಅಣೆಕಟ್ಟಿಗೆ 5.19 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಇತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ. ಒಳಹರಿವಿಗೆ ಪ್ರತಿಕ್ರಿಯೆಯಾಗಿ 3.43 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೆ ಕೃಷಿ ನೀರಾವರಿ ಅಗತ್ಯಗಳನ್ನು ಪೂರೈಸಲು ಹೆಚ್ಚುವರಿ 18,593 ಕ್ಯೂಸೆಕ್ ನೀರನ್ನು ನರ್ಮದಾ ಮುಖ್ಯ ಕಾಲುವೆ ವ್ಯವಸ್ಥೆಗೆ ಹರಿಸಲಾಗಿದೆ.
ಗುಜರಾತ್ನ ಹಲವೆಡೆ ಪ್ರವಾಹ ಪರಿಸ್ಥಿತಿ ಇನ್ನೂ ಗಂಭೀರವಾಗಿ ಮುಂದುವರೆದಿದೆ. ಜುನಾಗಢ ಜಿಲ್ಲೆಯ ಆಖಾ ಗ್ರಾಮದಲ್ಲಿ ಅತ್ಯಂತ ಧೈರ್ಯದಿಂದ ಕಾರ್ಯಾಚರಣೆ ನಡೆಸಿದ ಎನ್ಡಿಆರ್ಎಫ್ ವಿವಿಧ ಸ್ಥಳಗಳಲ್ಲಿ ಸಿಲುಕಿದ್ದ ಹಿರಿಯ ನಾಗರಿಕರು ಮತ್ತು ಇತರ ನಾಲ್ವರು ಗ್ರಾಮಸ್ಥರನ್ನು ಸುರಕ್ಷಿತವಾಗಿ ಕರೆತಂದಿದೆ.
ಸೆಪ್ಟೆಂಬರ್ 18 ರಂದು ಎನ್ಡಿಆರ್ಎಫ್ ಗುಜರಾತ್ನ ಅರಾವಳಿ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ಸಿಲುಕಿದ್ದ ಒಟ್ಟು 157 ಜನರನ್ನು ರಕ್ಷಿಸಿತ್ತು. ಲಕ್ಷೇಶ್ವರಿ ಗ್ರಾಮದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿರುವ ಎನ್ಡಿಆರ್ಎಫ್ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಏತನ್ಮಧ್ಯೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಧಾರಾಕಾರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿನ ಜಿಲ್ಲಾಧಿಕಾರಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದು, ಪರಿಹಾರ ಕಾರ್ಯಾಚರಣೆಗಳ ಬಗ್ಗೆ ನಿಗಾ ವಹಿಸಿದ್ದಾರೆ.
ಗುಜರಾತ್ನ ವಿವಿಧೆಡೆ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿಯನ್ನು ಒಳಗೊಂಡ ಒಟ್ಟು 10 ತುಕಡಿಗಳನ್ನು ನಿಯೋಜಿಸಲಾಗಿದೆ. ಈ ಸಿಬ್ಬಂದಿ ಅನೇಕ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. 270 ಕ್ಕೂ ಹೆಚ್ಚು ನಾಗರಿಕರನ್ನು ಯಶಸ್ವಿಯಾಗಿ ರಕ್ಷಿಸಿದ್ದು ಈ ಯೋಧರ ಮಹತ್ಸಾಧನೆಯಾಗಿದೆ.
ರಸ್ತೆಗಳಿಗೆ ಅಡ್ಡಿಯಾಗಿರುವ ಬಿದ್ದ ಮರಗಳನ್ನು ತೆರವುಗೊಳಿಸಲು, ವಾಹನ ಸಂಚಾರವನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ. ನರ್ಮದಾ ನದಿಯ ಭರೂಚ್ ಮತ್ತು ಅಂಕಲೇಶ್ವರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಖ್ಯೆ 502 ರಲ್ಲಿ ನೀರಿನ ಮಟ್ಟವು 40 ಅಡಿಗಳಿಗೆ ಏರಿದೆ. ಇದು ಅಪಾಯದ ಮಟ್ಟಕ್ಕಿಂತ 12 ಅಡಿ ಹೆಚ್ಚಾಗಿದೆ. ಸದ್ಯ ಪ್ರವಾಹದ ಕಾರಣದಿಂದ ಮುಂಬೈ-ಅಹಮದಾಬಾದ್ ತೇಜಸ್ ಎಕ್ಸ್ಪ್ರೆಸ್ ಮತ್ತು ಶತಾಬ್ದಿ ಎಕ್ಸ್ಪ್ರೆಸ್ ಸೇರಿದಂತೆ ಕನಿಷ್ಠ 18 ರೈಲುಗಳನ್ನು ರದ್ದುಗೊಳಿಸಲಾಗಿದೆ.
"ರಾಜ್ಯ ಬಿಜೆಪಿ ಸರ್ಕಾರವು ರೈತರಿಗೆ ಅಗತ್ಯವಿರುವಾಗ ಅಣೆಕಟ್ಟಿನ ನೀರು ಬಿಡುಗಡೆ ಮಾಡಲು ನಿರಾಕರಿಸಿತ್ತು. ಬದಲಿಗೆ, ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಜಲಾಶಯವು ಉಕ್ಕಿ ಹರಿಯುವಂತೆ ಮಾಡಲು ನೀರು ಸಂಗ್ರಹಿಸಿತ್ತು" ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಆಮ್ ಆದ್ಮಿ ಪಾರ್ಟಿ ಕೂಡ ಇದೇ ರೀತಿಯ ಆರೋಪ ಮಾಡಿದೆ.
ಇದನ್ನೂ ಓದಿ : ಅಕ್ರಮ ಹಣ ವರ್ಗಾವಣೆ ಆರೋಪ; ಹೀರೊ ಮೋಟೊಕಾರ್ಪ್ ಸಿಎಂಡಿ ಮುಂಜಾಲ್ ಇಡಿಯಿಂದ ವಿಚಾರಣೆ