ವಡೋದರಾ (ಗುಜರಾತ್): ಗುಜರಾತ್ ಕಾಂಗ್ರೆಸ್ ಶೀಘ್ರದಲ್ಲೇ ಗುಜರಾತ್ ಬಿಜೆಪಿ ಘಟಕದೊಂದಿಗೆ ವಿಲೀನಗೊಳ್ಳಲಿದೆ. ಶೀಘ್ರದಲ್ಲೇ ಬಿಜೆಪಿ-ಕಾಂಗ್ರೆಸ್ ನಡುವಿನ ಗುಪ್ತ ಪ್ರೇಮ ಹೊರಬರಲಿದೆ. ಗುಜರಾತ್ ಚುನಾವಣೆ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ನಡೆಯಲಿದೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸಂಚಲನದ ಹೇಳಿಕೆ ನೀಡಿದ್ದಾರೆ.
ವಡೋದರಾದಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನವೇ ರಾಜ್ಯದ ಜನತೆಗೆ ಮಹತ್ವದ ಭರವಸೆಗಳನ್ನು ನೀಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ಒಂದೆಡೆ ಬಿಜೆಪಿಯ '27 ವರ್ಷಗಳ ದುರಾಡಳಿತ' ಮತ್ತೊಂದೆಡೆ ಆಪ್ನ 'ಹೊಸ ರಾಜಕೀಯ' ಮಾದರಿ ಇದೆ. ಬಿಜೆಪಿ ತನ್ನ 'ಸ್ನೇಹಿತರ' 10 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ. ಬಿಜೆಪಿ ಏಕೆ ಈ ಕ್ರಮ ಕೈಗೊಂಡಿತು?. ಇದಕ್ಕಾಗಿ ಆ 'ಸ್ನೇಹಿತರು' ದಾನವಾಗಿ ಬಿಜೆಪಿಗೆ ಎಷ್ಟು ಹಣ ನೀಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಭರ್ಜರಿ ಭರವಸೆ: ಗುಜರಾತ್‌ನಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಉಚಿತವಾಗಿ ವಿದ್ಯುತ್ ಪೂರೈಕೆ ಹಾಗೂ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಕೇಜ್ರಿವಾಲ್ ಘೋಷಿಸಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಜನತೆಗೆ ಉಚಿತ ವಿದ್ಯುತ್ ನೀಡಲಿದೆ. ಅಲ್ಲದೇ, ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲು ಯೋಜನೆ ರೂಪಿಸುತ್ತಿದ್ದೇವೆ. ದೆಹಲಿ ಮಾದರಿಯಲ್ಲಿ ಗುಜರಾತ್ನ ಹಳ್ಳಿಗಳಲ್ಲಿನ ಆಸ್ಪತ್ರೆಗಳು ಮತ್ತು ಶಾಲೆಗಳನ್ನೂ ಅಭಿವೃದ್ಧಿ ಪಡಿಸುತ್ತೇವೆ ಎಂದೂ ಹೇಳಿದ್ದಾರೆ.
ಪಂಜಾಬ್ ಮತ್ತು ದೆಹಲಿ ಎರಡರಲ್ಲೂ ನಮ್ಮ ಪಕ್ಷ ಅಧಿಕಾರದಲ್ಲಿದೆ. ಈಗಾಗಲೇ ಪಂಜಾಬ್‌ನಲ್ಲಿ 25 ಲಕ್ಷ ಕುಟುಂಬಗಳಿಗೆ ಯಾವುದೇ ವಿದ್ಯುತ್ ಶುಲ್ಕವಿಲ್ಲದೇ ಉಚಿತವಾಗಿ ಪೂರೈಸಲಾಗಿದೆ. ಗುಜರಾತ್ನಲ್ಲೂ ನಮ್ಮ ಮೊದಲ ಭರವಸೆ ಉಚಿತ ವಿದ್ಯುತ್ ಪೂರೈಕೆಗೆ ಸಂಬಂಧಿಸಿದೆ. ಗುಜರಾತ್‌ನಲ್ಲಿ ವಿದ್ಯುತ್ ಬಿಲ್‌ಗಳು ಕೂಡ ಹೆಚ್ಚಾಗಿವೆ. ಜನರು ಸಂಕಷ್ಟದಲ್ಲಿದ್ದಾರೆ. ಯುವಕರು ಜೀವನೋಪಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ನಾವು ದೆಹಲಿಯಲ್ಲಿ ಕೆಲವೇ ವರ್ಷಗಳಲ್ಲಿ 12 ಲಕ್ಷ ಯುವಕರಿಗೆ ಉದ್ಯೋಗ ಒದಗಿಸಿದ್ದೇವೆ. ಉದ್ಯೋಗ ಸಿಗುವವರೆಗೆ ತಿಂಗಳಿಗೆ 3,000 ರೂಪಾಯಿಗಳ ಭತ್ಯೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ತೆಲಂಗಾಣದ ಮಗುವಿಗೆ ಸ್ವಿಸ್ ಕಂಪನಿ ನೆರವಿನಿಂದ ₹ 16 ಕೋಟಿ ವೆಚ್ಚದ ಚಿಕಿತ್ಸೆ