ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಎಪಿಗೆ ದೊಡ್ಡ ಗೆಲುವು ಲಭಿಸಿದಂತಾಗಿದೆ. ಬಿಜೆಪಿ ದಾಖಲೆಯ ಶೇ 53.33 ಮತಗಳನ್ನು ಗಳಿಸಿದ್ದು, ಆಪ್ ಶೇ 12 ರಷ್ಟು ಪಾಲು ಪಡೆದಿದೆ. ಮಧ್ಯಾಹ್ನದ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಕಾಂಗ್ರೆಸ್ ಪಾಲು ಶೇ 26.9ಕ್ಕೆ ಕುಸಿದಿದೆ.
ಚುನಾವಣಾ ಆಯೋಗದ ಅಂಕಿ- ಅಂಶಗಳ ಪ್ರಕಾರ, ಬಿಜೆಪಿ 150 ಸ್ಥಾನಗಳಲ್ಲಿ, ಕಾಂಗ್ರೆಸ್ 22 ಸ್ಥಾನಗಳಲ್ಲಿ, ಎಎಪಿ 6, ಸಮಾಜವಾದಿ ಪಕ್ಷ 1 ಮತ್ತು ಸ್ವತಂತ್ರ ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಜನರು ಕಾಂಗ್ರೆಸ್ ಮತ್ತು ಎಎಪಿ ಎರಡನ್ನೂ ತಿರಸ್ಕರಿಸಿದ್ದಾರೆ. ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದ್ದಾರೆ. ಬಿಜೆಪಿಯು ಗುಜರಾತ್‌ನಲ್ಲಿ ದಾಖಲೆಯ ಸೀಟುಗಳನ್ನು ಗೆದ್ದು ಹೊಸ ದಾಖಲೆ ನಿರ್ಮಿಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಸಿಂಗ್ ವಘೇಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಮತಗಳನ್ನು ಕಸಿದುಕೊಳ್ಳುವ ಮೂಲಕ ಎಎಪಿ ಬಿಜೆಪಿಯ 'ಬಿ' ಟೀಮ್ ಆಗಿ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಲಿತ್ ವಸೋಯಾ ಆರೋಪಿಸಿದ್ದಾರೆ. ಆಪ್ ಉಪಸ್ಥಿತಿಯು ಬಿಜೆಪಿಗೆ 150 ಸ್ಥಾನಗಳನ್ನು ದಾಟಲು ಸಹಾಯ ಮಾಡಿತು ಎಂದು ವಸೋಯಾ ಹೇಳಿದರು.
ಗುಜರಾತ್ ಚುನಾವಣೆಯ ಮತ್ತೊಂದು ಅಚ್ಚರಿ ಎಂದರೆ ಆಪ್ ಮೊದಲ ಬಾರಿಗೆ ಸ್ಪರ್ಧಿಸಿ ಶೇ 12 ರಷ್ಟು ಮತ ಪಡೆದಿರುವುದು ಮತ್ತು ಕನಿಷ್ಠ 6 ಸ್ಥಾನಗಳಲ್ಲಿ ಮುನ್ನಡೆದಿರುವುದು.
ಆದರೆ, ಈ ಮಧ್ಯೆ ಆಪ್ಗೆ ಸಾಕಷ್ಟು ಆಘಾತಗಳೂ ಎದುರಾಗಿವೆ. ಅದರ ಪ್ರಮುಖ ಮುಖಗಳಾದ ಇಸುದನ್ ಗಧ್ವಿ, ಗೋಪಾಲ್ ಇಟಾಲಿಯಾ, ಅಲ್ಪೇಶ್ ಠಾಕೋರ್ ಸದ್ಯ ಮತ ಎಣಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಕಾಂಗ್ರೆಸ್ ಪಕ್ಷದ ಪರೇಶ್ ಧನಾನಿ, ಲಲಿತ್ ಕಗಾತ್ರ, ತುಷಾರ್ ಚೌಧರಿ, ರುತ್ವಿಕ್ ಮಕ್ವಾನಾ ಅವರಂಥ್ ಅನೇಕ ದೊಡ್ಡ ನಾಯಕರು ಕೂಡ ತಮ್ಮ ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಇದನ್ನೂ ಓದಿ: ಭರ್ಜರಿ ಗೆಲುವು: ಡಿ. 11 ಅಥವಾ 12 ರಂದು ಗುಜರಾತ್ ಸಿಎಂ ಅಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ