ಅಹಮದಾಬಾದ್( ಗುಜರಾತ್): 1993 ರ ಮುಂಬೈ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಎಟಿಎಸ್ ಭರ್ಜರಿ ಬೇಟೆಯಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ನಾಲ್ವರು ಶಂಕಿತ ಸಹಚರರನ್ನು ಬಂಧಿಸುವಲ್ಲಿ ಗುಜರಾತ್ ಎಟಿಎಸ್ ಯಶಸ್ವಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಗುಜರಾತ್ ಎಟಿಎಸ್ ಯೂಸುಫ್ ಬಟ್ಕಾ, ಅಬೂಬಕರ್, ಸೋಯಬ್ ಬಾಬಾ ಮತ್ತು ಸೈಯದ್ ಖುರೇಷಿ ಸೇರಿದಂತೆ ನಾಲ್ವರು ಶಂಕಿತರನ್ನು ಬಂಧಿಸಿದೆ.
ನಕಲಿ ಪಾಸ್‌ಪೋರ್ಟ್‌ನೊಂದಿಗೆ ಅಹಮದಾಬಾದ್ ಆಗಮನ: ದಾವೂದ್ ಬಂಟರು ಎಂದು ಶಂಕಿಸಲಾಗಿರುವ ಬಂಧಿತ ನಾಲ್ವರು ಆರೋಪಿಗಳು ನಕಲಿ ಪಾಸ್‌ಪೋರ್ಟ್ ಬಳಸಿ ಅಹಮದಾಬಾದ್‌ಗೆ ಆಗಮಿಸಿದ್ದರು. ಬಂಧಿತ ಆರೋಪಿ ಒಬ್ಬರಿಗೆ ರೆಡ್ ಕಾರ್ನರ್ ನೋಟಿಸ್ ಕೂಡ ನೀಡಲಾಗಿದೆ ಎಂದು ಎಟಿಎಸ್ ಡಿಐಜಿ ದೀಪೆನ್ ಭದ್ರ ಹೇಳಿದ್ದಾರೆ. ಬಾಂಬ್ ದಾಳಿಯಲ್ಲಿ ಭಾಗವಹಿಸಿರುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸೂಕ್ತ ತನಿಖೆ: ಪಾಕಿಸ್ತಾನದಲ್ಲಿ ಸ್ಫೋಟದ ತರಬೇತಿ ಪಡೆದ ಆರೋಪಿ ಭಾರತಕ್ಕೆ ಪ್ರಯಾಣ ಬೆಳೆಸಿದ್ದ. ಬಾಂಬ್ ದಾಳಿಯ ನಂತರ ಅವರು ಮತ್ತೆ ಭಾರತವನ್ನು ತೊರೆದಿದ್ದರು. ಆಗ ಭಾರತ ತೊರದ ಇವರು ಏನೆಲ್ಲ ಮಾಡಿದರು ಎಂಬ ಬಗ್ಗೆ ಈಗ ತನಿಖೆ ನಡೆಯುತ್ತಿದೆ ಎಂದಿರುವ ಎಟಿಎಸ್ ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಮೂವರು 1995 ರಲ್ಲೇ ಭಾರತವನ್ನು ತೊರೆದರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
1993 ಮುಂಬೈ ಸ್ಫೋಟದಲ್ಲಿ 250 ಸಾವು: ಅಂದು ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ 250 ಜನರು ಕೊಲ್ಲಲ್ಪಟ್ಟಿದ್ದರು, ಸುಮಾರು 700 ಕ್ಕೂ ಹೆಚ್ಚು ಜನರು ಈ ಘಟನೆಯಲ್ಲಿ ಗಾಯಗೊಂಡಿದ್ದರು. ಮತ್ತೊಂದು ಕಡೆ ಬಾಂಬ್ ಸ್ಫೋಟಕ್ಕೆ ಕಾರಣರಾದವರಲ್ಲಿ ಹಲವರು ಪರಾರಿಯಾಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಹಾರಾಷ್ಟ್ರ ಪೊಲೀಸರು ಸುದೀರ್ಘ ತನಿಖೆ ನಡೆಸಿದ್ದರು. ಸಿಬಿಐ ಕೂಡ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಹಲವು ಆರೋಪಿಗಳು ಬೇರೆ ದೇಶಕ್ಕೆ ಪರಾರಿಯಾಗಿದ್ದರು ಈ ಸಂಬಂಧ ದೇಶದ ಉನ್ನತ ತನಿಖಾ ದಳಗಳು ಬಂಧಿಸಲು ಈಗಲೂ ಕಾರ್ಯ ಪ್ರವೃತ್ತವಾಗಿವೆ.
ಸರ್ದಾರ್‌ನಗರದಲ್ಲಿ ಸಿಕ್ಕಿ ಬಿದ್ದ ಆರೋಪಿಗಳು: ದಾವೂದ್‌ನ ಎಲ್ಲಾ ನಾಲ್ವರು ಶಂಕಿತ ಬಂಟರು ಸರ್ದಾರ್‌ನಗರ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ನಕಲಿ ಪಾಸ್‌ಪೋರ್ಟ್‌ಗಳನ್ನು ಎಟಿಎಸ್ ವಶಪಡಿಸಿಕೊಂಡಿದೆ. ವಿಚಾರಣೆ ವೇಳೆ ಆರೋಪಿಗಳು ಮುಂಬೈ ಸ್ಫೋಟದಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದು ಬಂದಿದೆ. ಮುಂಬೈ ದಾಳಿಗೂ ಮುನ್ನ ಪ್ರಮುಖ ಆರೋಪಿಯೊಬ್ಬ ದಾವೂದ್ ಅವರನ್ನು ಭೇಟಿಯಾದ ನಂತರ, ಅವರು ಭಾರತದಲ್ಲಿ ಬಾಂಬ್ ದಾಳಿ ನಡೆಸುವ ಮೊದಲು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ. ದಾಳಿ ಬಳಿಕ ಸಹಚರರೊಂದಿಗೆ ಎಸ್ಕೇಪ್ ಆಗಿದ್ದ ಎಂಬ ಅಂಶ ಬಗ್ಗೆ ತನಿಖೆ ವೇಳೆ ಬಯಲಾಗಿದೆ.
ಆರೋಪಿ ವಾಸ್ತವ್ಯದ ಅವಧಿ ಬಗ್ಗೆ ವಿಚಾರಣೆ: ಪ್ರಮುಖ ಆರೋಪಿ ಮುಂಬೈ ಸ್ಫೋಟದ ಬಳಿಕ ದೀರ್ಘಕಾಲದವರೆಗೆ ದೇಶದಲ್ಲಿದ್ದ ಎಂದು ಎಟಿಎಸ್ ತಿಳಿಸಿದೆ. ಆ ದಿಸೆಯಲ್ಲಿ ವಿಚಾರಣೆ ನಡೆಯುತ್ತಿದೆ. ಆರೋಪಿಗಳು ಹಲವಾರು ದೇಶಗಳಿಗೆ ಹೋಗಲು ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಸುತ್ತಿದ್ದರು. ಡಿವೈಎಸ್ಪಿ ಕೆ ಕೆ ಪಟೇಲ್ ಅವರಿಗೆ ಮೇ 12 ರಂದು ಈ ಬಗ್ಗೆ ಮಾಹಿತಿ ಸಿಕ್ಕಿತು. ಇದೀಗ ಆರೋಪಿಯ ಪಾಸ್‌ಪೋರ್ಟ್, ಸೆಲ್‌ಫೋನ್ ಸೇರಿದಂತೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಮುನಾಫ್ ಮುಸಾನಿ ಬಂಧನ: ಫೆಬ್ರವರಿ 10 2020 ರಂದು, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಮುಂಬೈ ವಿಮಾನ ನಿಲ್ದಾಣದಲ್ಲಿ 1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿ ಹಲಾರಿ ಮೂಸಾ ಅವರನ್ನು ಬಂಧಿಸಿತ್ತು.
ಇದನ್ನು ಓದಿ:ರಾಜಸ್ಥಾನದಲ್ಲಿ ಆರ್ಡಿಎಕ್ಸ್ ಪತ್ತೆ ಪ್ರಕರಣ: ಒಬ್ಬ ಆರೋಪಿ ಬಂಧಿಸಿದ ಗುಜರಾತ್ ಎಟಿಎಸ್