ನವದೆಹಲಿ: ಕಾಂಗ್ರೆಸ್ ಪಕ್ಷವು ಬರುವ ಗುಜರಾತ್ ವಿಧಾನಸಭೆ ಚುನಾವಣೆಗೆ 46 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ ಬಿಡುಗಡೆಗೊಳಿಸಿತು. ಹಿಂದಿನ ಶುಕ್ರವಾರ 43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು.
ಪ್ರಮುಖ ಅಭ್ಯರ್ಥಿಗಳಿವರು.. : 2ನೇ ಪಟ್ಟಿಯಲ್ಲಿ ಭುಜ್ ಕ್ಷೇತ್ರದಿಂದ ಅರ್ಜುನ್ ಬಾಯ್ ಭುಡಿಯಾ, ಜುನಾಗಢ-ಭಿಖಾಭಾಯಿ ಜೋಶಿ, ಸೂರತ್ ಪೂರ್ವ ಕ್ಷೇತ್ರ- ಅಸ್ಲಾಮ್ ಸೈಕಲ್ ವಾಲಾ, ಸೂರತ್ ಉತ್ತರ-ಅಶೋಕ ಬಾಯ್ ಪಟೇಲ್, ವಲ್ಸಾದ್ ಕ್ಷೇತ್ರ- ಕಮಲಕುಮಾರ್ ಪಟೇಲ್ ಪ್ರಮುಖ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್: ಮೂವರು ಮಹಿಳಾ ಅಭ್ಯರ್ಥಿಗಳಾದ ಲಿಂಬ್ಡಿಯಿಂದ ಕಲ್ಪನಾ ಕರಮ್ಸಿಭಾಯಿ ಮಕ್ವಾನಾ, ದೇಡಿಯಾಪಾಡಾ-(ಎಸ್‌ಟಿ) ಜೆರ್ಮಾಬೆನ್ ಸುಖಲಾಲ್ ವಾಸವಾ ಮತ್ತು ಕರಂಜ್- ಭಾರತಿ ಪ್ರಕಾಶ್ ಪಟೇಲ್ ಅವರಿಗೆ ಕೈ ಪಕ್ಷ ಟಿಕೆಟ್ ಕೊಟ್ಟಿದೆ.
ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷವು ಎರಡು ದಶಕಕ್ಕಿಂತ ಹೆಚ್ಚು ಅವಧಿಯಿಂದ ಅಧಿಕಾರದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾಗಿದ್ದು ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಉತ್ಸಾಹದಲ್ಲಿ ಮುನ್ನುಗ್ಗುತ್ತಿದೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಿಗದಿಯಾಗಿದೆ.
ಇದನ್ನೂ ಓದಿ:ವಿರೋಧದ ನಡುವೆ ನರೋಡಾ ವಿಧಾನಸಭಾ ಕ್ಷೇತ್ರಕ್ಕೆ ಪಾಯಲ್ ಕುಕ್ರಾಣಿಗೆ ಟಿಕೆಟ್ ನೀಡಿದ ಕಮಲ!