ಗೋದ್ರಾ: ಗುಜರಾತ್ ಇತಿಹಾಸದಲ್ಲೇ ಅತ್ಯಂತ ಭೀಕರ ಗಲಭೆಗೆ ಕಾರಣವಾಗಿದ್ದ 2002ರಲ್ಲಿ 59 ಜನರನ್ನು ಕೊಲೆಗೈದ ಗೋದ್ರಾ ಹತ್ಯಾಕಾಂಡ ಪ್ರಕರಣದ ಆರೋಪಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋದ್ರಾದಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಅಪರಾಧಿ ರಫೀಕ್ ಬಟುಕ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಇವರನ್ನು ಫೆಬ್ರವರಿ 2021 ರಲ್ಲಿ ಬಂಧಿಸಲಾಗಿತ್ತು. ಕಳೆದ ವರ್ಷ ಅವರ ಬಂಧನದ ನಂತರ ಪ್ರಕರಣದಲ್ಲಿ ಅವರ ವಿರುದ್ಧದ ವಿಚಾರಣೆ ಪ್ರಾರಂಭವಾಗಿತ್ತು.
ಫೆಬ್ರವರಿ 27, 2002 ರಂದು ಕರಸೇವಕರೊಂದಿಗೆ ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ರೈಲಿಗೆ ಬೆಂಕಿ ಹಚ್ಚಿ 59 ಮಂದಿಯನ್ನು ಕೊಂದ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ರಾಜ್ಯದಲ್ಲಿ ಕೋಮುಗಲಭೆಗೆ ಕಾರಣವಾಗಿತ್ತು. ಈ ಪೈಕಿ ಅಲ್ಪಸಂಖ್ಯಾತ ಸಮುದಾಯದವರು ಕೊಲ್ಲಲ್ಪಟ್ಟಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಇದುವರೆಗೆ ತಪ್ಪಿತಸ್ಥರೆಂದು ಪರಿಗಣಿಸಲ್ಪಟ್ಟ 35ನೇ ತಪ್ಪಿತಸ್ಥ ಅಪರಾಧಿ ಇವರು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಆರ್‌ಸಿ ಕೊಡೇಕರ್ ಮಾಹಿತಿ ನೀಡಿದ್ದಾರೆ.
ಪಂಚಮಹಲ್ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಕಳೆದ ವರ್ಷ ಫೆಬ್ರವರಿಯಲ್ಲಿ ಗೋದ್ರಾ ಪಟ್ಟಣದ ಪ್ರದೇಶದಿಂದ ಆರೋಪಿ ಬಟುಕ್ ಅನ್ನು ಬಂಧಿಸಿತ್ತು. ಆರೋಪಿ ಎಂದು ಹೆಸರಿಸಲ್ಪಟ್ಟ ನಂತರ ಆತ ಗೋದ್ರಾದಿಂದ ಪರಾರಿಯಾಗಿದ್ದರು.
ವಿಶೇಷ ಎಸ್‌ಐಟಿ ನ್ಯಾಯಾಲಯವು ಮಾರ್ಚ್ 1, 2011 ರಂದು ಪ್ರಕರಣದಲ್ಲಿ 31 ಜನರನ್ನು ದೋಷಿ ಎಂದು ಘೋಷಿಸಿ ಅವರಲ್ಲಿ 11 ಜನರಿಗೆ ಮರಣದಂಡನೆ ಮತ್ತು 20 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹಾಗೆ 2017 ರ ಅಕ್ಟೋಬರ್‌ನಲ್ಲಿ ಗುಜರಾತ್ ಹೈಕೋರ್ಟ್ 11 ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ.. ಬಂಧನ ಬೆನ್ನಲ್ಲೇ ಜಾಮೀನು ಪಡೆದ ಮಾಜಿ ಶಾಸಕ