ನವದೆಹಲಿ : ಕ್ಯಾಬ್ ಅಗ್ರಿಗೇಟರ್‌ಗಳಿಗೆ (ಓಲಾ,ಊಬರ್) ಶುಕ್ರವಾರ ಹೊಸ ಮಾರ್ಗಸೂಚಿ ಹೊರಡಿಸಲಾಗಿದ್ದು, ಹಲವು ನಿಬಂಧನೆ ವಿಧಿಸಲಾಗಿದೆ. ಈ ಷರತ್ತುಗಳು ಖುಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೆಡ್‌ಸೀರ್ ಸಂಸ್ಥೆ ಆತಂಕ ಹೊರಹಾಕಿದೆ.
ಈ ಮಾರ್ಗಸೂಚಿಯಲ್ಲಿ ಮುಖ್ಯವಾಗಿ ಮೂಲ ದರಕ್ಕಿಂತ ಶೇ.1.5ಕ್ಕಿಂತ ಹೆಚ್ಚಿನ ದರವನ್ನು ಪ್ರಯಾಣಿಕರ ಮೇಲೆ ಹೇರಬಾರದು ಹಾಗೂ ಶೇ.50ರಷ್ಟು ರಿಯಾಯಿತಿ ನೀಡಬಾರದು ಎಂದು ಸೂಚಿಸಲಾಗಿದೆ. ರೈಡ್ ಪೂಲಿಂಗ್ ಪಡೆಯುವ ಮಹಿಳಾ ಪ್ರಯಾಣಿಕರಿಗೆ ಮಾರ್ಗಸೂಚಿಗಳು ಸುರಕ್ಷತೆಯನ್ನು ಒದಗಿಸುತ್ತವೆ. ಇತರ ಮಹಿಳಾ ಪ್ರಯಾಣಿಕರೊಂದಿಗೆ ಮಾತ್ರ ಪೂಲ್ ಮಾಡುವ ಆಯ್ಕೆಯನ್ನು ಅವರಿಗೆ ಒದಗಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಅಲ್ಲದೆ ಪ್ರಯಾಣ ಅಂಗೀಕರಿಸಲ್ಪಟ್ಟ ನಂತರ ನಿಖರ ಕಾರಣವಿಲ್ಲದೆ ರದ್ದುಗೊಳಿಸಿದರೆ ಚಾಲಕ ಮತ್ತು ಸವಾರ ಇಬ್ಬರಿಗೂ ಒಟ್ಟು ಶುಲ್ಕದ ಶೇ.10ರಷ್ಟು (100 ರೂ. ಮೀರಬಾರದು) ದಂಡ ವಿಧಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ವಲಯದ ಪ್ರಮುಖ ಶೇರುದಾರರು ಎನಿಸಿಕೊಂಡಿರುವ ಓಲಾ ಹಾಗೂ ಊಬರ್ ಹೊಸ ಮಾರ್ಗಸೂಚಿಯ ಕುರಿತಂತೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಮಾರ್ಗಸೂಚಿ ಕುರಿತಂತೆ ಮಾತನಾಡಿರುವ ರೆಡ್‌ಸೀರ್ ಸಂಸ್ಥೆಯ ಅಸೋಸಿಯೇಟ್ ಗ್ರಾಹಕರ ಇಂಟರ್ನೆಟ್ ಪಾಲುದಾರ ಉಜ್ವಲ್ ಚೌಧರಿ, ಸರ್ಕಾರವು ಬಿಡುಗಡೆ ಮಾಡಿರುವ ಮಾರ್ಗಸೂಚಿಯೂ ಮಿಶ್ರ ಪರಿಣಾಮ ಬೀರಲಿದೆ ಎಂದಿದ್ದಾರೆ. ಇದಲ್ಲದೆ ಈ ಮಾರ್ಗಸೂಚಿಗಳು 6-8 ಕೋಟಿ ಗ್ರಾಹಕರಿಗೆ ತಮ್ಮ ಪ್ರಯಾಣದ ಅಗತ್ಯಗಳಿಗಾಗಿ ನೀಡುವ ದರದ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದಿದ್ದಾರೆ.
ರೆಡ್‌ಸೀರ್ ಪ್ರಕಾರ, ಕೊರೊನಾ ವೈರಸ್ ಹಿನ್ನೆಲೆ ಟ್ರಾವೆಲಿಂಗ್ ಕ್ಷೇತ್ರವು ಕ್ರಮೇಣ ಚೇತರಿಸಿಕೊಂಡಿದೆ. ಯಾಕೆಂದರೆ, ಗ್ರಾಹಕರು ಪ್ರಯಾಣಕ್ಕಾಗಿ ಸಂಪೂರ್ಣ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿಲ್ಲ ಎಂದಿದ್ದಾರೆ.