ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬರುತ್ತಿದ್ದು, ಮುಂಬೈ ನಗರದಲ್ಲಿ ಭಾಗಶಃ ಲಾಕ್‌ಡೌನ್ ಹೇರುವ ಕುರಿತು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ.
ನಿನ್ನೆ ಒಂದೇ ದಿನ ಮುಂಬೈನಲ್ಲಿ 1,361 ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 131 ದಿನಗಳ ಬಳಿಕ ಒಂದೇ ದಿನ ಇಷ್ಟೊಂದು ಕೋವಿಡ್ ಕೇಸ್ಗಳು ಪತ್ತೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶೀಘ್ರದಲ್ಲೇ ನಗರದಲ್ಲಿ ಭಾಗಶಃ ಲಾಕ್‌ಡೌನ್ ಹೇರಬಹುದು ಎಂದು ಮುಂಬೈ ಉಸ್ತುವಾರಿ ಸಚಿವ ಅಸ್ಲಾಮ್ ಶೇಖ್ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ನಿನ್ನೆ ಒಂದೇ ದಿನ 17 ಲಕ್ಷ ಮಂದಿಗೆ ಕೋವಿಡ್ ಲಸಿಕೆ.. 15,388 ಕೇಸ್ಗಳು ಪತ್ತೆ
ನೈಟ್‌ಕ್ಲಬ್‌ಗಳು, ಪ್ರವಾಸಿ ತಾಣಗಳು ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳ ಮೇಲೆ ನಿರ್ಬಂಧ ಹೇರುವ ಸಾಧ್ಯತೆಯಿದೆ. ಪರಿಸ್ಥಿತಿಯನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಸ್ಲಾಮ್ ಶೇಖ್ ಹೇಳಿದ್ದಾರೆ.
ಔರಂಗಾಬಾದ್ ಲಾಕ್‌ಡೌನ್
ಕೊರೊನಾ ಉಪಟಳ ಹೆಚ್ಚಾಗಿದ್ದರಿಂದ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಮಾರ್ಚ್ 11 ರಿಂದ ಏಪ್ರಿಲ್ 4 ರವರೆಗೆ ಭಾಗಶಃ ಲಾಕ್‌ಡೌನ್ ಘೋಷಣೆಯಾಗಿದೆ ಎಂದು ಜಿಲ್ಲಾಧಿಕಾರಿ ಸುನಿಲ್ ಚವಾಣ್ ಹೇಳಿದ್ದಾರೆ. ಧಾರ್ಮಿಕ, ರಾಜಕೀಯ ಹೀಗೆ ದೊಡ್ಡ ಪ್ರಮಾಣದಲ್ಲಿ ಜನ ಸೇರುವ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಆಹಾರ, ಔಷಧ ಸೇರದಂತೆ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅವರು ತಿಳಿಸಿದ್ದಾರೆ.