ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಮುಚ್ಚಿ ಹಾಕಲು ಎನ್‌ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ 25 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಸ್ಫೋಟಕ ಆರೋಪ ಕೇಳಿಬಂದಿದ್ದು, ಇದೀಗ ಸಮೀರ್ ವಾಂಖೆಡೆ ಕಾನೂನು ರಕ್ಷಣೆ ಕೋರಿ ಮುಂಬೈ ಪೊಲೀಸ್ ಮೊರೆ ಹೋಗಿದ್ದಾರೆ.
ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗ್ರಾಲೆಗೆ ಈ ಕುರಿತಾಗಿ ಪತ್ರ ಬರೆದಿರುವ ಅವರು, ತಮ್ಮ ವಿರುದ್ಧದ ಲಂಚದ ಆರೋಪ ನಿರಾಧಾರವಾಗಿದೆ. ಹಾಗಾಗಿ, ಕಾನೂನು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಅಕ್ಟೋಬರ್ 2 ರಂದು ಹಡಗಿನ ಮೇಲೆ ನಡೆದ ದಾಳಿಯಲ್ಲಿ ಕೆಲವರು ನನ್ನನ್ನು ಸಿಲುಕಿಸುವ ಯತ್ನ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಶಾರೂಖ್ ಪುತ್ರ ಆರ್ಯನ್ ಬಿಡುಗಡೆಗೆ 25 ಕೋಟಿ ರೂ. ಲಂಚಕ್ಕೆ ಬೇಡಿಕೆ: ಆರೋಪ
ಎನ್‌ಸಿಬಿ ವಕ್ತಾರ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಹೇಳಿಕೆಯನ್ನು ಪತ್ರದಲ್ಲಿ ಪರೋಕ್ಷವಾಗಿ ಉಲ್ಲೇಖಿಸಿರುವ ಅವರು, ಗೌರವಾನ್ವಿತರೊಬ್ಬರಿಂದ ನನಗೆ ಬೆದರಿಕೆಯಿದೆ. ನನ್ನ ಹುದ್ದೆಯಿಂದ ವಜಾಗೊಳಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.
ಕಳೆದ ವಾರ ಸಮೀರ್ ವಾಂಖೆಡೆ ಅವರು ಬಾಲಿವುಡ್ ತಾರೆಯರನ್ನು ಟಾರ್ಗೆಟ್ ಮಾಡುತ್ತಿದ್ದು, ಅವರಿಂದ ಹಣ ಸುಲಿಗೆ ಮಾಡುವುದಕ್ಕಾಗಿ ಮತ್ತು ಬ್ಲ್ಯಾಕ್ಮೇಲ್ ಮಾಡುವುದಕ್ಕಾಗಿ ದುಬೈಗೆ ತೆರಳಿದ್ದರು ಎಂದು ನವಾಬ್ ಮಲಿಕ್ ಆರೋಪಿಸಿದ್ದರು
ನನ್ನನ್ನು ಯಾವುದೇ ಉದ್ದೇಶಪೂರ್ವಕ ಸುಳ್ಳು ಆರೋಪದಲ್ಲಿ ಸಿಲುಕಿಸದಂತೆ ನೋಡಿಕೊಳ್ಳಿ ಎಂದು ಪೊಲೀಸ್ ಅಧಿಕಾರಿಗೆ ವಾಂಖೆಡೆ ಮನವಿ ಮಾಡಿದ್ದಾರೆ. ಈ ಹಿಂದೆ ಜೀವ ಬೆದರಿಕೆಯಿದೆ ಎಂದು ನಗರ ಮತ್ತು ರಾಜ್ಯ ಪೊಲೀಸರಿಗೆ ವಾಂಖೆಡೆ ದೂರು ನೀಡಿದ್ದರು.
ಇದನ್ನೂ ಓದಿ: ಆರ್ಯನ್ ಬಿಡುಗಡೆಗೆ 25 ಕೋಟಿ ಲಂಚ ಕೇಳಿದ ಆರೋಪ: ಎನ್‌ಸಿಬಿ ಸ್ಪಷ್ಟನೆ