ನೋಯ್ಡಾ( ಉತ್ತರಪ್ರದೇಶ): ರಾಜ್ಯ ಜಿಎಸ್‌ಟಿ ಇಲಾಖೆಯು ಉತ್ತರ ಪ್ರದೇಶದ 71 ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಸತತ ದಾಳಿ ನಡೆಸಿದ್ದು ಭರ್ಜರಿ ಬೇಟೆಯಾಡಿದೆ. ಎರಡು ಪ್ರತ್ಯೇಕ ದಾಳಿಗಳಲ್ಲಿ ಇಲಾಖೆಯು 2.55 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಅಲ್ಲದೇ 20 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದೆ.
ತಂಡವು ನೋಯ್ಡಾದ ಅನೇಕ ವ್ಯಾಪಾರಿಗಳ ವ್ಯವಹಾರದ ಮೇಲೆ ದಾಳಿ ಮಾಡಿದೆ. ಮೂಲಗಳ ಪ್ರಕಾರ, ದಾಖಲೆಗಳನ್ನು ಮರು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಹತ್ತು ಜಿಎಸ್‌ಟಿ ತಂಡಗಳು 20 ವ್ಯವಹಾರಗಳ ಮೇಲೆ ದಾಳಿ ನಡೆಸಿವೆ. ಸೋಮವಾರ ನಡೆದ ದಾಳಿಯಲ್ಲಿ ಇಲಾಖೆ ವತಿಯಿಂದ 1.42 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, 51.17 ಲಕ್ಷ ರೂ ದಂಡ ಹಾಕಲಾಗಿದೆ. ಮಂಗಳವಾರ 1.13 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, 41.12 ಲಕ್ಷ ರೂ. ದಂಡ ವಿಧಿಸಲಾಗಿದೆ.
ರಾಜ್ಯ ತೆರಿಗೆಯ ಹೆಚ್ಚುವರಿ ಆಯುಕ್ತ ಅದಿತಿ ಸಿಂಗ್ ಈ ಬಗ್ಗೆ ಮಾತನಾಡಿ, ಸಂಸ್ಥೆಗಳ ದತ್ತಾಂಶದಲ್ಲಿ ಕಂಡು ಬಂದ ತೆರಿಗೆ ವಂಚನೆ ಮಾಹಿತಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಎರಡು ದಿನಗಳಲ್ಲಿ 92.29 ಲಕ್ಷ ರೂಪಾಯಿ ತೆರಿಗೆ ಮತ್ತು ದಂಡವನ್ನು ವಸೂಲಿ ಮಾಡಲಾಗಿದೆ. ಮೂರು ಉಕ್ಕು ಸಂಸ್ಥೆಗಳ ಮೇಲೆ ದಾಳಿ ನಡೆಸಿ ತನಿಖೆ ಮಾಡಲಾಗುತ್ತಿದ್ದು, 17 ಸಂಸ್ಥೆಗಳ ತನಿಖೆ ಪೂರ್ಣಗೊಂಡಿದೆ ಎಂದು ಸಿಂಗ್ ಹೇಳಿದರು. ಇಲಾಖೆಯ ರಾಡಾರ್‌ನಲ್ಲಿ ಇನ್ನೂ ಅನೇಕ ಉದ್ಯಮಿಗಳು ಇದ್ದಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.
ಇದನ್ನೂ ಓದಿ: ಜಿಎಸ್‌ಟಿ ಸಂಗ್ರಹ : ಖಜಾನೆಗೆ ಬಂತು ದಾಖಲೆಯ ಮೊತ್ತ.. ಇದು ಎರಡನೇ ಅತಿ ಹೆಚ್ಚು ಜಿಎಸ್‌ಟಿ ಕಲೆಕ್ಷನ್
ಮಂಗಳವಾರ ದಾಳಿ ನಡೆಸಿದ ಸಂಸ್ಥೆಗಳಲ್ಲಿ ಸರ್ವಶ್ರೀ ವೃಂದಾವನ ಸ್ವೀಟ್ಸ್ ರೆಸ್ಟೋರೆಂಟ್, ಅನ್ಸಾರಿ ಕಿರಣ ಸ್ಟೋರ್, ಸೆಕ್ಟರ್ -44 ರ ಗೀತಾಂಜಲಿ ಸಲೂನ್, ಸೆಕ್ಟರ್ -20 ರಲ್ಲಿ ಮಲಿಕ್ ಮೋಟಾರ್ಸ್ ಮೇಲೆ ದಾಳಿ ನಡೆಸಲಾಗಿದೆ. ಕಬ್ಬಿಣ, ಉಕ್ಕು ಮತ್ತು ಪೀಠೋಪಕರಣಗಳನ್ನು ಮಾರಾಟ ಮಾಡುವ 12 ಸಂಸ್ಥೆಗಳು, ಗೋಡೌನ್‌ಗಳು, ಶೋರೂಂಗಳ ಮೇಲೆ ಸೋಮವಾರ ದಾಳಿ ನಡೆಸಲಾಯಿತು. ಅಲ್ಲಿ ಸರಕುಗಳಿಗೆ ರಶೀದಿ ನೀಡದೇ, ಬಿಲ್‌ಗಳಿಲ್ಲದೇ ಖರೀದಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶ ಬಯಲಾಗಿದೆ.