ಬಿಜನೌರ್: ಮೂರು ದಿನಗಳ ಹಿಂದೆ ಅವರಿಬ್ಬರಿಗೆ ಮದುವೆಯಾಗಿತ್ತು. ಹೆಂಡ್ತಿಯೊಂದಿಗೆ ಬದುಕಿ ಬಾಳಬೇಕಾಗಿದ್ದ ಆತ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾನೆ.
ಏ. 25ಕ್ಕೆ ಮದುವೆ...
ಜಾಟಾನ್ ನಿವಾಸಿ ಅರ್ಜುನ್ ಜೊತೆ ಚಾಂದ್ಪುರಿನ ಕಸ್ಬಾ ಸ್ಯಾಊ ನಿವಾಸಿ ಬಬಲಿ ಇದೇ ಏಪ್ರಿಲ್ 25ರಂದು ಮದುವೆಯಾಗಿತ್ತು. ಸಂಜೆ 7ಕ್ಕೆ ಮದುವೆ ಮುಗಿಸಿಕೊಂಡು ಯುವತಿ ಮನೆಯಿಂದ ಬಿಜನೌರ್ಗೆ ಮದುವೆ ಕುಟುಂಬ ವಾಪಸಾಗಿತ್ತು. ಆ ದಿನ ರಾತ್ರಿಯಿಂದ ಅರ್ಜನ್ಗೆ ತೀವ್ರ ಜ್ವರ ಉಲ್ಬಣವಾಗಿತ್ತು.
ಜಿಲ್ಲಾ ಆಸ್ಪತ್ರೆಗೆ ದಾಖಲು...
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರ್ಜನ್ನನ್ನು ಕುಟುಂಬಸ್ಥರು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅರ್ಜುನ್ಗೆ ಕೊರೊನಾ ಸೋಂಕು ದೃಢಪಟ್ಟಿರುವುದು ತಿಳಿದು ಬಂದಿತು. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೂ ಸಹ ಅರ್ಜುನ್ ಆರೋಗ್ಯ ಕ್ಷಿಣಿಸುತ್ತಲೇ ಹೋಯಿತು.
ಆಕ್ಸಿಜನ್ ಕೊರತೆಯಿಂದ ಸಾವು...
ಏಪ್ರಿಲ್ 29ರಂದು ಆಕ್ಸಿಜನ್ ಕೊರತೆಯಿಂದಾಗಿ ಅರ್ಜುನ್ ಸಾವಾಯಿತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿಷಯ ತಿಳಿದ ಎರಡೂ ಕುಟುಂಬ ಮೌನಕ್ಕೆ ಶರಣಾಯಿತು. ಮಗ ಮತ್ತು ಪತಿಯನ್ನು ಕಳೆದುಕೊಂಡ ಆ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ವಧುವಿನ ಆರೋಗ್ಯದಲ್ಲಿ ಏರುಪೇರು...
ನೂರು ಕಾಲ ನಿನ್ನೊಂದಿಗೆ ಬಾಳುತ್ತೇನೆಂದು ಪ್ರಮಾಣ ಮಾಡಿ ಕೇವಲ 72 ಗಂಟೆಗಳಲ್ಲಿ ಪತ್ನಿಯನ್ನು ಒಂಟಿ ಮಾಡಿ ಯುವಕ ಬಾರದ ಲೋಕಕ್ಕೆ ತೆರಳಿದ್ದಾನೆ. ಗಂಡನನ್ನು ಕಳೆದುಕೊಂಡ ನವವಿವಾಹಿತೆಯ ಆರೋಗ್ಯದಲ್ಲೂ ಏರುಪೇರು ಕಂಡು ಬಂದಿದೆ. ಆಸ್ಪತ್ರೆ ಸಿಬ್ಬಂದಿ ಎರಡೂ ಕುಟುಂಬ ಮತ್ತು ಮದುವೆಯಲ್ಲಿ ಭಾಗಿಯಾದವರನ್ನು ಕೋವಿಡ್ ಪರೀಕ್ಷೆಗೊಳಪಡಿಸಿ ಸ್ಯಾಂಪಲ್ಸ್ ಪಡೆದಿದೆ. ವರದಿ ನೀರಿಕ್ಷಿಸಲಾಗುತ್ತಿದೆ.