ಹೈದರಾಬಾದ್ (ತೆಲಂಗಾಣ): ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆಯ ಪ್ರಚಾರ ಭಾನುವಾರ ಸಂಜೆ 6 ಗಂಟೆಗೆ ಸ್ಥಗಿತಗೊಂಡಿದ್ದು, ಡಿಸೆಂಬರ್ 1ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.
24 ವಿಧಾನಸಭಾ ಕ್ಷೇತ್ರಗಳಲ್ಲಿ ಜಿಎಚ್‌ಎಂಸಿಯ 150 ವಾರ್ಡ್‌ಗಳಿಗೆ 1,122 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಚುನಾವಣೆಯಲ್ಲಿ 74.67 ಲಕ್ಷಕ್ಕಿಂತ ಹೆಚ್ಚು ನೋಂದಾಯಿತ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಸ್ಥಳೀಯ ಪಕ್ಷಗಳ ಜೊತೆ ರಾಷ್ಟ್ರೀಯ ಪಕ್ಷಗಳ ಹೋರಾಟ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಉನ್ನತ ನಾಯಕರು ಪಕ್ಷದ ಪರವಾಗಿ ಪ್ರಚಾರ ನಡೆಸಿದರೆ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯನಿರ್ವಾಹಕ ಅಧ್ಯಕ್ಷರು ತಮ್ಮ ಪಕ್ಷದ ಪ್ರಚಾರವನ್ನು ನಿರ್ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ನಾಯಕರು ಪ್ರಚಾರ ನಡೆಸಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ಈ ಫಲಿತಾಂಶ ದಾರಿ ಮಾಡಿಕೊಡಲಿದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಕಣದಲ್ಲಿದೆ.
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಮತ್ತು ಹಿರಿಯ ನಾಯಕರು ಕೂಡ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಹೈದರಾಬಾದ್‌ನ ಲೋಕಸಭಾ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಮತ್ತು ಅವರ ಸಹೋದರ ಶಾಸಕ ಅಕ್ಬರುದ್ದೀನ್ ಒವೈಸಿ ಕೂಡ ಹಲವಾರು ಕಡೆ ಪ್ರಚಾರ ನಡೆಸಿ, ತಮ್ಮ ಪಕ್ಷದ ಗೆಲುವಿಗೆ ಜನರ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ.
ಜಿಎಚ್‌ಎಂಸಿ ಚುನಾವಣೆಗೆ 51,000 ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ತೆಲಂಗಾಣ ಡಿಜಿಪಿ ಮಹೇಂದ್ರ ರೆಡ್ಡಿ ಈ ಹಿಂದೆ ಹೇಳಿದ್ದರು. ಡಿಸೆಂಬರ್ 1 ರಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಲಿದ್ದು, ಸಂಜೆ ಆರು ಗಂಟೆಯವರೆಗೆ ನಡೆಯಲಿದೆ. ಮತ ಎಣಿಕೆ ಡಿಸೆಂಬರ್ 4 ರಂದು ನಡೆಯಲಿದೆ.