ಶಿಮ್ಲಾ: ಶೀತಗಾಳಿಯಿಂದ ತತ್ತರಿಸುತ್ತಿರುವ ಹಿಮಾಚಲ ಪ್ರದೇಶಕ್ಕೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಆಗಮಿಸಿದೆ. ಇಂದು ಮುಂಜಾನೆ ಮೈ ಕೊರೆಯುವ ಚಳಿ ನಡುವೆಯೇ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ, ರಾಜ್ಯದ ಪಕ್ಷದ ಮುಖ್ಯಸ್ಥ ಪ್ರತಿಭಾ ಸಿಂಗ್ ಮತ್ತು ರಾಜ್ಯ ಸಚಿವರು ಹಾಗೂ ಪಕ್ಷದ ಶಾಸಕರು ಸೇರಿದಂತೆ ನೂರಾರು ಕಾರ್ಯಕರ್ತರು ಇಂದೋರ್ ಬಳಿಯ ಮನ್ಸೆರ್ ಟೋಲ್ ಬಳಿ ರಾಹುಲ್ ಗಾಂಧಿ ಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದರು.
ತೀವ್ರ ಚಳಿಯಲ್ಲೂ ಪಕ್ಷದ ಕಾರ್ಯಕರ್ತರ ಉತ್ಸಾಹದಿಂದಾಗಿ ರಾಹುಲ್ ಗಾಂಧಿ ಹುರುಪಿನಿಂದ ಹೆಜ್ಜೆ ಹಾಕಿದ್ದಾರೆ. ರಾಜ್ಯದಲ್ಲಿ ಯಾತ್ರೆಗೆ ಹೆಚ್ಚಿನ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಆಯ್ದ ಜನರಿಗೆ ಮಾತ್ರೆ ಯಾತ್ರೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಈ ನಡುವೆ ಯಾತ್ರೆಯುದ್ದಕ್ಕೂ ರಾಹುಲ್ ಗಾಂಧಿ ಸಾಮಾನ್ಯ ಜನರನ್ನು ಅದರಲ್ಲೂ ವಿಶೇಷವಾಗಿ ಯುವಜನತೆ ಹಾಗೂ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ
ಸಾಮಾನ್ಯ ಜನರ ಕಲ್ಯಾಣ ಬಿಜೆಪಿ ಉದ್ದೇಶವಲ್ಲ: ಇದೇ ವೇಳೆ ಬಿಜೆಪಿ- ಆರ್ಎಸ್ಎಸ್ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕ, ಮೂರು -ನಾಲ್ಕು ಕೋಟ್ಯಧೀಶರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ, ರೈತ ವಿರೋಧಿ ಕಾನೂನು ಮತ್ತು ಜಿಎಸ್ಟಿಗಳನ್ನು ಜಾರಿಗೆ ತಂದಿತು. ರೈತರ, ಯುವಜನತೆ ಮತ್ತು ಕಾರ್ಮಿಕರ ಕಲ್ಯಾಣ ಅವರಿಗೆ ಎಂದು ಅಜೆಂಡಾವೇ ಆಗಿರಲಿಲ್ಲ. ಹಣದುಬ್ಬರ ಮತ್ತು ನಿರುದ್ಯೋಗದಂತ ವಿಷಯಗಳನ್ನು ಅವರು ನಿರ್ಲಕ್ಷ್ಯಿಸಿದ್ದಾರೆ ಎಂದು ಟೀಕಿಸಿದರು.
ಯಾತ್ರೆಯ ಅಗತ್ಯತೆಯ ಕುರಿತು ಮಾತನಾಡಿದ ಅವರು, ನಾಲ್ಕು ತಿಂಗಳ ಹಿಂದೆ ಕನ್ಯಾಕುಮಾರಿಯಿಂದ ನಾವು ಈ ಯಾತ್ರೆ ಆರಂಭಿಸಿದೆ. ಈ ಮೂಲಕ ಜನರನ್ನು ಒಟ್ಟಿಗೆ ತರುವ ಕೆಲಸ ಮಾಡಿದ್ದೇವೆ. ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದ ವಿಷಯಗಳ ಕುರಿತು ನಾವು ಧ್ವನಿ ಎತ್ತಬೇಕಿದೆ. ಈ ವಿಷಯಗಳನ್ನು ನ್ಯಾಯಾಂಗ, ಮಾಧ್ಯಮದ ಮುಂದೆ ಕೂಡ ಪ್ರಸ್ತಾಪಿಸಲು ಸಾಧ್ಯವಿಲ್ಲ ಕಾರಣ ಅವರೆಲ್ಲಾ ಬಿಜೆಪಿ ಒತ್ತಡದಲ್ಲಿದ್ದಾರೆ ಎಂದರು.
ಹಿಮಾಚಲದಲ್ಲಿ ಒಂದು ದಿನ ಸಾಗಲಿರುವ ಯಾತ್ರೆ: ಯಾತ್ರೆಯ ಮಾರ್ಗಸೂಚಿಯಲ್ಲಿ ಈ ಹಿಂದೆ ಯಾತ್ರೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಪಾದಯಾತ್ರೆ ನಡೆಸುವ ಯೋಜನೆ ಇರಲಿಲ್ಲ. ಆದರೆ, ಈ ಮಾರ್ಗವನ್ನು ಬದಲಾಯಿಸಲಾಗಿದೆ. ಕೇವಲ ಒಂದು ದಿನಕ್ಕೆ ರಾಜ್ಯದಲ್ಲಿ ಯಾತ್ರೆ ಸೀಮಿತವಾಗಿದೆ. ನನಗೆ ರಾಜ್ಯದ ಜನರೊಂದಿಗೆ ಮಾತುಕತೆ ನಡೆಸಲು ಹೆಚ್ಚಿನ ಸಮಯ ಬೇಕಿದೆ. ಆದರೆ, ಈ ಯಾತ್ರೆ ಜನವರಿ 30ರಂದು ಗಾಂಧಿ ಹುತಾತ್ಮರಾದ ದಿನದಂದು ಕಾಶ್ಮೀರದಲ್ಲಿ ಮುಕ್ತಾಯಗೊಳಿಸಬೇಕಿದೆ ಎಂದು ಅವರು ತಿಳಿಸಿದರು. ಯಾತ್ರೆಯ ವೇಳೆ ದೊಡ್ಡ ಕಲಿಕೆಯ ಅನುಭವ ಆಯಿತು. ಜನರ ಹೃದಯದಲ್ಲಿ ಏನಿದೆ? ಯಾವ ವಿಷಯದ ಬಗ್ಗೆ ಅವರು ಕಾಳಜಿ ಹೊಂದಿದ್ದಾರೆ ಎಂಬುದು ತಿಳಿಯಿತು ಎಂದು ಇದೇ ವೇಳೆ ತಿಳಿಸಿದರು. ಇಂದೋರ್ ವಿಧಾಸಭಾ ಕ್ಷೇತ್ರದಲ್ಲಿ 24 ಕಿ.ಮೀ ಉದ್ದ ಈ ಯಾತ್ರೆ ಸಾಗಲಿದೆ.
ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಅಜಯ್ ಠಾಕೂರ್ ಕೂಡ ಹಿಮಾಚಲ ಪ್ರದೇಶದಲ್ಲಿ ಬುಧವಾರ ಸಾಗುವ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಜೊತೆಯಾಗಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸುಖು, ಪಾದಯಾತ್ರೆಯಲ್ಲಿ ತಾವು ಜಾರಿಗೆ ತಂದಿರುವ ಹಳೆ ಪಿಂಚಣಿ ವ್ಯವಸ್ಥೆಯ 100 ಫಲಾನುಭವಿಗಳನ್ನು ರಾಹುಲ್ ಗಾಂಧಿ ಅವರಿಗೆ ಪರಿಚಯಿಸಲಿದ್ದಾರೆ.
ಇದನ್ನೂ ಓದಿ: ವಿಮಾನದ ತುರ್ತು ಬಾಗಿಲು ತೆರೆದ ಪ್ರಯಾಣಿಕ..ಹೇಳಿಕೆ ನೀಡಿದ ಡಿಜಿಸಿಎ