ನವದೆಹಲಿ: ದೇಶದ ಭದ್ರತೆ ಮತ್ತು ಗೌಪ್ಯತೆಗೆ ಅಪಾಯಕಾರಿಯಾದ ಚೀನಾದ ಆ್ಯಪ್ಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಮತ್ತೆ 54 ಅಪ್ಲಿಕೇಶನ್ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಚೀನಾ ನಿರ್ಮಿತ ಆ್ಯಪ್ಗಳನ್ನು ಈ ಹಿಂದೆ ನಿಷೇಧಿಸಿ ಬಳಕೆಗೆ ನಿರ್ಬಂಧ ವಿಧಿಸಿದಾಗ್ಯೂ ಅವು ಹೊಸ ಹೆಸರು, ಬ್ರಾಂಡ್ ಮೂಲಕ ದೇಶಕ್ಕೆ ಕಾಲಿಟ್ಟಿದ್ದವು. ಈ ಅಪ್ಲಿಕೇಶನ್ಗಳು ದೇಶದ ಆಂತರಿಕ ವಿಚಾರ, ಭದ್ರತೆಗೆ ತೊಡಕಾದ ಕಾರಣ ಅಂತಹ ಆ್ಯಪ್ಗಳನ್ನು ಹುಡುಕಿ ಬಳಕೆಗೆ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2020ರಲ್ಲಿ ಚೀನಾದ ಅಲಿಬಾಬಾ, ಗೇಮಿಂಗ್ ಆಧಾರಿತ ನೆಟ್ಈಸ್ ಸೇರಿದಂತೆ ವಿವಿಧ ಅಪ್ಲಿಕೇಶನ್ಗಳಿಗೆ ನಿಷೇಧ ಹೇರಲಾಗಿತ್ತು. ಇದೀಗ ಆ ಆ್ಯಪ್ಗಳು ಮರುನಾಮಕರಣಗೊಂಡು ಹೊಸ ಹೆಸರಿನೊಂದಿಗೆ ದೇಶದಲ್ಲಿ ಚಾಲ್ತಿಗೆ ಬಂದಿದ್ದವು. ಇವುಗಳು ದೇಶದ ಸೂಕ್ಷ್ಮ ಮಾಹಿತಿಗಳನ್ನು ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ರವಾನೆ ಮಾಡುತ್ತಿರುವುದನ್ನು ತಂತ್ರಜ್ಞಾನ ಮತ್ತು ಐಟಿ ಇಲಾಖೆ ಪತ್ತೆ ಹಚ್ಚಿದೆ.
ಚೀನಾದ ನಿಷೇಧಿತ 54 ಅಪ್ಲಿಕೇಶನ್ಗಳು ಗೂಗಲ್ ಪ್ಲೇ ಸ್ಟೋರ್ನಿಂದಲೂ ಕಿತ್ತು ಹಾಕಲಾಗಿದೆ. 2020 ರಿಂದ ಈವರೆಗೂ 224 ಅಪ್ಲಿಕೇಶನ್ಗಳನ್ನು ಸರ್ಕಾರ ಬ್ಯಾನ್ ಮಾಡಿದೆ. ಮೊದಲ ಹಂತದಲ್ಲಿ ಜನಪ್ರಿಯವಾದ ಟಿಕ್ಟಾಕ್, ಶೇರ್ಚಾಟ್, ವೀಚಾಟ್, ಹೆಲೋ, ಲೈಕಿ ಸೇರಿದಂತೆ 54 ಆ್ಯಪ್ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ, ನವೆಂಬರ್ನಲ್ಲಿ ಅಲಿಎಕ್ಸ್ಪ್ರೆಸ್, ಹಣ ವರ್ಗಾವಣೆ ಆ್ಯಪ್ ಆದ ಅಲಿಪೇ ಕ್ಯಾಶಿಯರ್ ಸೇರಿದಂತೆ 43 ಆ್ಯಪ್, ಸೆಪ್ಟೆಂಬರ್ನಲ್ಲಿ 118 ಆ್ಯಪ್ಗಳನ್ನು ದೇಶದಲ್ಲಿ ಬಳಕೆಗೆ ನಿರ್ಬಂಧ ವಿಧಿಸಿತ್ತು.
ಯಾವೆಲ್ಲಾ ಆ್ಯಪ್ಗಳು ಬ್ಯಾನ್: ಸ್ವೀಟ್ ಸೆಲ್ಫಿ ಹೆಚ್ಡಿ, ಬ್ಯೂಟಿ ಕ್ಯಾಮೆರಾ-ಸೆಲ್ಫಿ ಕ್ಯಾಮೆರಾ, ಈಕ್ವಲೈಸರ್ ಅಂಡ್ ಬಾಸ್ ಬೂಸ್ಟರ್, ಕ್ಯಾಮ್ಕಾಡ್ ಫಾರ್ ಸೇಲ್ಸ್ಫೋರ್ಸ್ ಎಂಟ್, ಐಸೋಲ್ಯಾಂಡ್-2: ಆ್ಯಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಎಕ್ಸ್ರೀವರ್, ಆನ್ಮೋಯ್ಜಿ ಚೆಸ್, ಆನ್ಮೋಯ್ಜಿ ಅರೇನಾ, ಆ್ಯಪ್ಲಾಕ್, ಡ್ಯುಯಲ್ ಸ್ಪೇಸ್ ಲೈಟ್.
ಇದನ್ನೂ ಓದಿ: ಉಕ್ರೇನ್ ಬಳಿ ಭಾರಿ ಪ್ರಮಾಣದಲ್ಲಿ ರಷ್ಯಾದ ಮಿಲಿಟರಿ ಪಡೆ ನಿಯೋಜನೆ: ಉಪಗ್ರಹ ಚಿತ್ರದಿಂದ ಬಹಿರಂಗ