ನವದೆಹಲಿ: ಖಾಸಗಿ ವ್ಯಾಪಾರದ ಮೂಲಕ ದೇಶೀಯ ಅಗತ್ಯತೆಗಳನ್ನು ಪೂರೈಸಲು ಈ ವರ್ಷ ಸುಮಾರು 10 ಲಕ್ಷ ಟನ್ ಉತ್ತಮ ಗುಣಮಟ್ಟದ ತೊಗರಿ ಬೇಳೆ ಆಮದು ಮಾಡಿಕೊಳ್ಳಲು ಮುಂಗಡ ಯೋಜನೆ ರೂಪಿಸಿರುವುದಾಗಿ ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ. ಅಗತ್ಯ ವಸ್ತುಗಳು ವಿಶೇಷವಾಗಿ ಬೇಳೆಕಾಳು ಮತ್ತು ಈರುಳ್ಳಿ ಬೆಲೆಗಳನ್ನು ಪರಿಶೀಲಿಸಲು ಸಂಪುಟ ಕಾರ್ಯದರ್ಶಿ ಕರೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಷಯ ಚರ್ಚಿಸಲಾಯಿತು. ಕೃಷಿ ಸಚಿವಾಲಯದ ಆರಂಭಿಕ ಅಂದಾಜಿನ ಪ್ರಕಾರ, ಹಿಂದಿನ ವರ್ಷದಲ್ಲಿ 4.34 ಮಿಲಿಯನ್ ಟನ್ ತೊಗರಿ ಬೇಳೆ ಉತ್ಪಾದನೆಯಾಗಿತ್ತು. ಆದ್ರೆ, ಈ ವರ್ಷ 2022-23 ರಲ್ಲಿ (ಜುಲೈ-ಜೂನ್) 3.89 ಮಿಲಿಯನ್ ಟನ್‌ಗಳಿಗೆ ಇಳಿಕೆಯಾಗುವ ಸಾಧ್ಯತೆ ಇದೆ.
ಕಲಬುರಗಿಯಲ್ಲಿ ತೊಗರಿ ಕುಂಠಿತ, ವಿಲ್ಟ್ ರೋಗಬಾಧೆ: ಉನ್ನತ ಮಟ್ಟದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ತೊಗರಿಯು ಖಾರಿಫ್ ಬೆಳೆ. ಕರ್ನಾಟಕ ರಾಜ್ಯದ ಕಲಬುರಗಿ ಪ್ರದೇಶದಲ್ಲಿ ಹವಾಮಾನ ವೈಪರೀತ್ಯ ಮತ್ತು ವಿಲ್ಟ್ ರೋಗದಿಂದಾಗಿ ತೊಗರಿ ಉತ್ಪಾದನೆಯಲ್ಲಿ ಈ ಬಾರಿ ಕೊರತೆ ಉಂಟಾಗಬಹುದು. ಹಾಗಾಗಿ, ಈ ಕೊರತೆ ನೀಗಿಸು ಸರ್ಕಾರ ಕ್ರಮ ಕೈಗೊಂಡಿದ್ದು, ವಿದೇಶದಿಂದ ಆಮದು ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
10 ಲಕ್ಷ ಟನ್ ತೊಗರಿ ಬೇಳೆ ಆಮದು: 2021-22ರಲ್ಲಿ ಸುಮಾರು 7.6 ಲಕ್ಷ ಟನ್ ತೊಗರಿ ಆಮದು ಮಾಡಿಕೊಳ್ಳಲಾಗಿದೆ. ಸುಗಮ ದೇಶೀಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ (ಡಿಸೆಂಬರ್-ನವೆಂಬರ್) ದೇಶವು ಸುಮಾರು 10 ಲಕ್ಷ ಟನ್ ತೊಗರಿ ಬೇಳೆ ಆಮದು ಮಾಡಿಕೊಳ್ಳಬೇಕಿದೆ. ಹಾಗಾಗಿ, ಸರ್ಕಾರವು ಮುಂಗಡ ಯೋಜನೆ ರೂಪಿಸಿದೆ ಮತ್ತು ಈಗಾಗಲೇ ಈ ಕುರಿತಾಗಿ ಖಾಸಗಿ ವ್ಯಾಪಾರಿಗಳೊಂದಿಗೆ ಚರ್ಚಿಸಲಾಗಿದೆ. 2022ರ ಡಿಸೆಂಬರ್‌ನಲ್ಲಿ ಸುಮಾರು 2 ಲಕ್ಷ ಟನ್‌ಗಳಷ್ಟು ತೊಗರಿಯನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ರಾಜ್ಯಾದ್ಯಂತ ತೊಗರಿ ಖರೀದಿ ಕೇಂದ್ರ ಆರಂಭಕ್ಕೆ ಕೇಂದ್ರ ಸರ್ಕಾರ ಸೂಚನೆ
ಯಾವುದೇ ಆಮದು ನಿರ್ಬಂಧವಿಲ್ಲ: ತೊಗರಿ ಬೇಳೆಕಾಳನ್ನು ಪೂರ್ವ ಆಫ್ರಿಕಾದ ದೇಶಗಳಿಂದ ಮತ್ತು ಮ್ಯಾನ್ಮಾರ್‌ನಿಂದ ಗರಿಷ್ಠ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ಈ ದೇಶಗಳಲ್ಲಿ ಸುಮಾರು 11-12 ಲಕ್ಷ ಟನ್‌ಗಳಷ್ಟು ತೊಗರಿ ಬೇಳೆ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಬೇಳೆ ಕಾಳುಗಳ ಸುಗಮ ಆಮದಿಗೆ ಅನುಕೂಲವಾಗುವಂತೆ, ಧೂಮೀಕರಣ ಮತ್ತು ಫೈಟೊಸಾನಿಟರಿ ಮಾನದಂಡಗಳನ್ನು ಸರಾಗಗೊಳಿಸುವಲ್ಲಿ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ. 2024 ರ ಮಾರ್ಚ್ 31 ರವರೆಗೆ ಅಮದಿಗೆ ಯಾವುದೇ ನಿರ್ಬಂಧವಿಲ್ಲ. ತೊಗರಿ ಬೇಳೆಯನ್ನು ಮುಕ್ತ ಸಾಮಾನ್ಯ ಪರವಾನಗಿ ಅಡಿಯಲ್ಲಿ ಅಮದು ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ತೊಗರಿ ಬೆಳೆ ನಷ್ಟದ ಗಂಭೀರ ಚರ್ಚೆ