ನವದೆಹಲಿ: ಹಬ್ಬದ ಸಮಯದಲ್ಲಿ ಕೇಂದ್ರ ಸರ್ಕಾರ ತಮ್ಮ ನೌಕರರಿಗೆ ಮತ್ತೊಮ್ಮೆ ಶುಭಸುದ್ದಿ ನೀಡಿದೆ. ಈ ಹಿಂದೆ ಎಲ್ಟಿಸಿ ಯೋಜನೆಯಡಿ ಬಡ್ಡಿ ರಹಿತ ಮುಂಗಡ ಪಾವತಿ ನೀಡಿ, ಎಲ್ಟಿಸಿ ವೋಚರ್ ಯೋಜನೆ ಜಾರಿ ಮಾಡಿದ್ದ ಸಚಿವಾಲಯ ಇದೀಗ ಈ ವೋಚರ್ನಲ್ಲಿ ನೌಕರರ ಸಂಬಂಧಿಕರು ಸಹ ಸರಕು ಮತ್ತು ಸೇವೆ ಸೇರಿ ಇತರೆ ವಸ್ತುಗಳ ಖರೀದಿ ಮಾಡಲು ಅವಕಾಶ ಕಲ್ಪಿಸಿದೆ.
ಎರಡನೇ ಬಾರಿಗೆ ಈ ಯೋಜನೆ ಕುರಿತಂತೆ ಹಲವು ನಿರೀಕ್ಷಿತ ಪ್ರಶ್ನೆಗಳಿಗೆ ಉತ್ತರಿಸಿರುವ ಸಚಿವಾಲಯವು, ಈ ಪ್ರಕ್ರಿಯೆಗೆ ಅವಕಾಶ ನೀಡಿದೆ. ಕಳೆದ ಅಕ್ಟೋಬರ್ 12ರಂದು ಕೇಂದ್ರವು ಎಲ್ಟಿಸಿ ನಗದು ವೋಚರ್ ಯೋಜನೆ ತಂದಿತ್ತು. ಇದರಡಿ ಕೇಂದ್ರ ನೌಕರರು ಶೇ.12ಕ್ಕಿಂತ ಹೆಚ್ಚಿನ ಜಿಎಸ್ಟಿ ತೆರಿಗೆ ಇರುವ ಯಾವ ಉಸ್ತುವನ್ನಾದರೂ ಖರೀದಿಸಬಹುದಿತ್ತು.
ಇದಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಆದರೆ, ಇಂತಹ ಖರೀದಿಯೂ ಕೇವಲ ಡಿಜಿಟಲ್ ಪಾವತಿ, ಚೆಕ್ ಅಥವಾ ಆರ್ಟಿಜಿಎಸ್, ಡಿಡಿ ಮೂಲಕವೇ ಮಾಡಬೇಕು ಎಂಬ ಷರತ್ತು ವಿಧಿಸಿತ್ತು.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರ ತಮ್ಮ ನೌಕರರಿಗೆ ತಮ್ಮ ಆಯ್ಕೆ ಸ್ಥಳಗಳಿಗೆ ಹೋಗಲು ಎಲ್ಟಿಸಿ ನೀಡುತ್ತಿತ್ತು. ಆದರೆ, ಇದೀಗ ಉದ್ಯೋಗಿಗಳಿಗೆ 10 ಸಾವಿರ ರೂ. ಬಡ್ಡಿ ರಹಿತ ಹಬ್ಬದ ಮುಂಗಡ ಯೋಜನೆ ಘೋಷಣೆ ಮಾಡಿತ್ತು.
ಆದರೆ, ಎಲ್ಟಿಸಿ ಅಡಿಯಲ್ಲಿ ನೌಕರನ ಕುಟುಂಬಸ್ಥರು ವಸ್ತುಗಳ ಖರೀದಿ ಮಾಡಬಹುದೇ ಎಂಬ ಪ್ರಶ್ನೆಗಳಿ ಉತ್ತರಿಸಿರುವ ಇಲಾಖೆ, ಯೋಜನೆಯ ಪ್ರಕಾರ ಖರೀದಿಸಿದ ಸರಕು ಮತ್ತು ಸೇವೆಗಳ ರಶೀದಿಗಳು ಸಂಗಾತಿಯ ಅಥವಾ ಎಲ್ಟಿಸಿ ಶುಲ್ಕಕ್ಕೆ ಅರ್ಹವಾದ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿರಬಹುದು ಎಂದು ತಿಳಿಸಲಾಗಿತ್ತು.
ರುಪೇ ಕಾರ್ಡ್ ರೂಪದಲ್ಲಿ 10 ಸಾವಿರ ರೂ.ಮುಂಗಡ ದೊರೆಯಲಿದ್ದು, ಮಾ.31, 2021ರವರೆಗೂ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಣವನ್ನು 10 ಕಂತುಗಳಲ್ಲಿ ಮರುಪಾವತಿ ಮಾಡಬಹುದಾಗಿದೆ ಎಂದು ಹಣಕಾಸು ಇಲಾಖೆ ಸ್ಪಷ್ಟನೆ ನೀಡಿತ್ತು.