ನವದೆಹಲಿ: ಜಾಗತಿಕವಾಗಿ ತೈಲ ಬೆಲೆ ಇಳಿಕೆಯಾಗುತ್ತಿದ್ದು, ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಗ್ಯಾಸೊಲಿನ್ ರಫ್ತು ಮೇಲಿನ ತೆರಿಗೆ ಹಾಗು ಇತರೆ ಇಂಧನ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಕಡಿತಗೊಳಿಸಿದೆ. ಈ ತೆರಿಗೆಯನ್ನು ಮೂರು ವಾರಗಳ ಹಿಂದಷ್ಟೇ ಕೇಂದ್ರ ಸರ್ಕಾರ ವಿಧಿಸಿತ್ತು. ಸರ್ಕಾರದ ಈ ನಿರ್ಧಾರವು ದೇಶದ ಪ್ರಮುಖ ತೈಲ ರಫ್ತುದಾರ ಖಾಸಗಿ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಸರ್ಕಾರಿ ಸ್ವಾಮ್ಯದ ಕಚ್ಚಾ ತೈಲ ರಫ್ತುದಾರ ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ ನೆರವಾಗಲಿದೆ.
ಪ್ರತಿ ಲೀಟರ್ ಡೀಸೆಲ್ ಮತ್ತು ವೈಮಾನಿಕ ಇಂಧನದ ಮೇಲೆ 2 ರೂಪಾಯಿ ಮತ್ತು ಗ್ಯಾಸೊಲಿನ್ ರಫ್ತು ಮೇಲೆ ಲೀಟರ್‌ಗೆ 6 ರೂ ಅಥವಾ ಸಂಪೂರ್ಣವಾಗಿ ತೆಗೆದು ಹಾಕಿದೆ. ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದೇ ರೀತಿ ದೇಶೀಯವಾಗಿ ಉತ್ಪಾದಿಸುವ ಕಚ್ಚಾತೈಲ ಪ್ರತಿ ಟನ್‌ಗೆ 23,250 ಹಳೆಯ ತೆರಿಗೆ ದರವಿದ್ದು ಇದೀಗ 17,000ಗೆ ಅಂದರೆ ಶೇ.27 ರಷ್ಟು ತೆರಿಗೆ ಕಡಿತ ಮಾಡಲಾಗಿದೆ.
ವಿಂಡ್‌ಫಾಲ್ ತೆರಿಗೆ ಎಂದರೇನು?: ಯಾವುದೇ ಸಂಸ್ಥೆ ಅಥವಾ ಕೈಗಾರಿಕೆಗಳು ತಮ್ಮ ವ್ಯಾಪ್ತಿಯನ್ನು ಮೀರಿ ಅನಿರೀಕ್ಷಿತ ಮಟ್ಟದ ಲಾಭಗಳಿಸಿದಾಗ ಅವುಗಳಿಗೆ ಸರ್ಕಾರ ವಿಧಿಸುವ ಒಂದು ವಿಧದ ತೆರಿಗೆಯೇ ಈ ವಿಂಡ್ ಫಾಲ್ ತೆರಿಗೆ.
ಸರ್ಕಾರ ಈ ತೆರಿಗೆಯನ್ನು ವಿಧಿಸುವುದೇಕೆ?: ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪರಾಮರ್ಶಿಸುವಾಗ ಅಥವಾ ಹೊಂದಾಣಿಕೆಯ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಿರುವಾಗ, ಹೆಚ್ಚಿನ ವೆಚ್ಚದೊಂದಿಗೆ ಆರ್ಥಿಕತೆಯನ್ನು ಬೆಂಬಲಿಸಬೇಕಾದಾಗ ಮತ್ತು ಹೆಚ್ಚುತ್ತಿರುವ ಕಚ್ಚಾ ಬೆಲೆಗಳಿಂದಾಗಿ ಚಾಲ್ತಿ ಖಾತೆ ಕೊರತೆ ಉಂಟಾದಾಗ ಅದಕ್ಕೆ ತೆರಿಗೆಗಳು ಬೇಕಾಗುತ್ತವೆ. ಹೀಗಾಗಿ ಸರ್ಕಾರ ಇಂಥ ತೆರಿಗೆಗಳನ್ನು ವಿಧಿಸುವುದುಂಟು.
ಇದನ್ನೂ ಓದಿ: Explainer: ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಪ್ರಹಾರ.. ಜನಸಾಮಾನ್ಯರಿಗೆ ಎಷ್ಟೆಲ್ಲ ಕಷ್ಟ.. ಇಲ್ಲಿದೆ ಸಂಪೂರ್ಣ ಮಾಹಿತಿ