ಪಾಲಕ್ಕಾಡ್ (ಕೇರಳ): ಕೇರಳದ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ರಾಜೀನಾಮೆ ಕೇಳಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ವಾಗ್ದಾಳಿ ನಡೆಸಿದರು. ರಾಜ್ಯಪಾಲರಿಗೆ ಅಂಥ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದ ವಿಜಯನ್, ರಾಜ್ಯಪಾಲರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ರಾಜ್ಯದ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ರಾಜೀನಾಮೆ ಕೇಳಿದ್ದು ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಇದೊಂದು ಅಸಾಮಾನ್ಯ ಕ್ರಮ. ರಾಜ್ಯದ ವಿಶ್ವವಿದ್ಯಾನಿಲಯಗಳನ್ನು ನಾಶ ಮಾಡುವ ಉದ್ದೇಶದಿಂದ ನಡಸುತ್ತಿರುವ ಯುದ್ಧ ಎಂದು ಪಿಣರಾಯಿ ವಿಜಯನ್ ಆರೋಪಿಸಿದರು.
ಈ ಒಂಬತ್ತು ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ನೇಮಕ ಮಾಡಿದ್ದು ರಾಜ್ಯಪಾಲರು. ಒಂದು ವೇಳೆ ಈ ನೇಮಕಾತಿಗಳು ಕಾನೂನುಬಾಹಿರವಾಗಿದ್ದರೆ ಅದರ ಪ್ರಾಥಮಿಕ ಹೊಣೆಗಾರಿಕೆ ರಾಜ್ಯಪಾಲರ ಮೇಲಿದೆ. ಆದರೆ ಉಪಕುಲಪತಿಗಳ ರಾಜೀನಾಮೆ ಕೇಳುವ ಅಧಿಕಾರ ರಾಜ್ಯಪಾಲರಿಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿ ನೇಮಕವಾಗಿದ್ದ ಇಲ್ಲಿನ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ (ವಿಸಿ) ನೇಮಕವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ನ ಇತ್ತೀಚಿನ ಆದೇಶವನ್ನೇ ಅಸ್ತ್ರ ಮಾಡಿಕೊಂಡಿರುವ ಖಾನ್, ಭಾನುವಾರ ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳ ವಿಸಿಗಳಿಗೆ ರಾಜೀನಾಮೆ ನೀಡುವಂತೆ ಕೋರಿದ್ದಾರೆ. ರಾಜ್ಯದ ವಿಶ್ವವಿದ್ಯಾನಿಲಯಗಳ ಕುಲಪತಿಯಾಗಿರುವ ಖಾನ್ ಅವರು ಸೋಮವಾರ ಬೆಳಗ್ಗೆ 11.30 ರೊಳಗೆ ತಮಗೆ ರಾಜೀನಾಮೆಗಳನ್ನು ತಲುಪಿಸುವಂತೆ ಸೂಚನೆ ನೀಡಿದ್ದಾರೆ ಎಂದು ರಾಜಭವನ ತಿಳಿಸಿದೆ.
ಇದನ್ನೂ ಓದಿ: 11 ಸುಗ್ರೀವಾಜ್ಞೆಗಳಿಗೆ ಸಹಿ ಹಾಕದ ರಾಜ್ಯಪಾಲರು: ವಿಶೇಷ ಅಧಿವೇಶನ ಕರೆದ ಕೇರಳ ಸರ್ಕಾರ