ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಸಹಕಾರಿ ನೀತಿ ಜಾರಿಗೆ ತರಲಿದೆ ಎಂದು ಕೇಂದ್ರ ಸಹಕಾರಿ ಸಚಿವರೂ ಆಗಿರುವ ಅಮಿತ್ ಶಾ ಹೇಳಿದ್ದಾರೆ. ದೆಹಲಿಯಲ್ಲಿಂದು ರಾಷ್ಟ್ರೀಯ ಸಹಕಾರಿ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಸಹಕಾರ ಚಳವಳಿಯನ್ನು ಬಲಪಡಿಸಲು ರಾಜ್ಯಗಳೊಂದಿಗೆ ಕೆಲಸ ಮಾಡಲಾಗುತ್ತದೆ.
ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಖ್ಯೆಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಗುವುದು. ದೇಶದಲ್ಲಿ ಪ್ರಸ್ತುತ 65,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಇವೆ ಎಂದು ವಿವರಿಸಿದ್ದಾರೆ.
ಕೇಂದ್ರ ಸರ್ಕಾರ ಕೇಂದ್ರ ಸಹಕಾರ ಸಚಿವಾಲಯವನ್ನು ಏಕೆ ಸ್ಥಾಪಿಸಿದೆ ಎಂದು ಕೆಲವರು ಆಶ್ಚರ್ಯ ಪಡುತ್ತಿದ್ದಾರೆ. ಸಹಕಾರಿಗಳು ರಾಜ್ಯ ಪಟ್ಟಿಯಲ್ಲಿಲ್ಲ. ನಾನು ಇದಕ್ಕೆ ಕಾನೂನುಬದ್ಧವಾಗಿ ಉತ್ತರಿಸಬಹುದು. ಆದರೆ, ನಾನು ಈ ವಿವಾದದಲ್ಲಿ ಸಿಲುಕಿಕೊಳ್ಳಲು ಬಯಸುವುದಿಲ್ಲ. ಕೇಂದ್ರವು ಯಾವುದೇ ಸಂಘರ್ಷವಿಲ್ಲದೆ ರಾಜ್ಯಗಳೊಂದಿಗೆ ಸಹಕರಿಸಲಿದೆ.
ಎಲ್ಲ ರಾಜ್ಯಗಳೊಂದಿಗೆ ಸಮನ್ವಯಗೊಳಿಸಿ ನಾವು ಸಹಕಾರಿ ಚಳವಳಿಯನ್ನು ಮುಂದುವರಿಸುತ್ತೇವೆ. ಈ ವಲಯವನ್ನು ಆಧುನೀಕರಿಸಲು ಹಾಗೂ ಮತ್ತಷ್ಟು ಬಲಪಡಿಸಲು ಸಹಕಾರ ಸಚಿವಾಲಯವನ್ನು ರಚಿಸಿದ್ದೇವೆ ಎಂದು ಹೇಳಿದ್ದಾರೆ.
2000ರಲ್ಲಿ ಅಂದಿನ ವಾಜಪೇಯಿ ಸರ್ಕಾರದ ನಂತರ ಮೋದಿ ಸರ್ಕಾರ ಸಹಕಾರ ನೀತಿಯನ್ನು ತರಲು ಪ್ರಯತ್ನಿಸುತ್ತಿದೆ. ಸಹಕಾರಿ ಚಳವಳಿ ಈಗ ದೇಶಕ್ಕೆ ತುರ್ತು ಎಂದು ಹೇಳಲಾಗಿದೆ. ಸಹಕಾರ ಸಂಘಗಳು ವಿಶೇಷವಾಗಿ ದೇಶದ ಅಭಿವೃದ್ಧಿಗೆ ಬೆಂಬಲ ನೀಡುತ್ತವೆ. ಭಾರತವನ್ನು ಐದು ಟ್ರಿಲಿಯನ್ ಆರ್ಥಿಕತೆಯನ್ನಾಗಿಸುವಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ, ತನ್ನ ಸರ್ಕಾರಕ್ಕೆ ಇದರ ಬಗ್ಗೆ ತಿಳಿದಿದೆ. ಯಾರಿಗೂ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಭರವಸೆ ನೀಡಿದರು.
ಇದನ್ನೂ ಓದಿ: 2024ಕ್ಕೆ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಮಿತ್ ಶಾ ವಿಶ್ವಾಸ