ನವದೆಹಲಿ : ಕೂನೂರು ಹೆಲಿಕಾಪ್ಟರ್ ಪತನದ ನಂತರ ದೇಶ ಶೋಕದಲ್ಲಿ ಮುಳುಗಿದೆ. ಈ ಬೆನ್ನಲ್ಲೇ ತೆರವಾದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ಸ್ಥಾನಕ್ಕೆ ಬೇರೊಬ್ಬರನ್ನು ಹುಡುಕುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ನಿಟ್ಟಿನಲ್ಲಿ ಈಗಿನ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಅವರನ್ನು ಸಿಡಿಎಸ್ ಸ್ಥಾನಕ್ಕೆ ನೇಮಕ ಮಾಡುವುದು ಅತ್ಯಂತ ವಿವೇಕಯುತ ನಿರ್ಧಾರ ಎಂದು ಕೆಲವರ ಅಭಿಪ್ರಾಯವಾಗಿದೆ.
ನರವಾಣೆ ಅವರು ಸೇನಾ ಮುಖ್ಯಸ್ಥರ ಹುದ್ದೆಯಿಂದ ನಿವೃತ್ತರಾಗಲು ಕೇವಲ ಐದು ತಿಂಗಳು ಬಾಕಿಯಿದೆ. ಇದಾದ ನಂತರ ಅವರನ್ನು ಸಿಡಿಎಸ್ ಆಗಿ ನೇಮಕ ಮಾಡಬಹುದು ಎಂದು ಹೇಳಲಾಗುತ್ತಿದೆ.
ಸಿಡಿಎಸ್ ನೇಮಿಸುವ ಕುರಿತು ನಿರ್ಧಾರ ಕೈಗೊಳ್ಳಲು ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಹಿರಿಯ ಕಮಾಂಡರ್‌ಗಳ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಲಿದೆ.
ಸಮಿತಿಯ ಶಿಫಾರಸಿನ ಆಧಾರದ ಮೇಲೆ ಮುಂದಿನ ಎರಡು ಮೂರು ದಿನಗಳಲ್ಲಿ ಸಿಡಿಎಸ್ ನೇಮಕ ವಿಚಾರವನ್ನು ಅಂತಿಮಗೊಳಿಸಲಾಗುತ್ತದೆ. ಆ ನಂತರ ಅನುಮೋದನೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಡಿಎಸ್ ಹುದ್ದೆಗೆ ಪ್ರಸ್ತಾವಿತ ಹೆಸರುಗಳನ್ನು ಕ್ಯಾಬಿನೆಟ್ ನೇಮಕಾತಿ ಸಮಿತಿಗೆ ಕಳುಹಿಸಲಾಗುವುದು. ಯಾರನ್ನು ನೇಮಕ ಮಾಡಬೇಕು ಎಂಬ ವಿಚಾರವನ್ನು ಅಂತಿಮಗೊಳಿಸಲಾಗುತ್ತದೆ. ಉನ್ನತಾಧಿಕಾರಿಗಳೇ ಸಂಭಾವ್ಯ ಹೆಸರುಗಳನ್ನು ನೀಡುತ್ತಾರೆ ಎಂದು ಮೂಲಗಳು ತಿಳಿಸಿವೆ.
ಭೂಸೇನೆ, ನೌಕಾಪಡೆ, ವಾಯುಸೇನೆಗೆ ಮುಖ್ಯಸ್ಥರನ್ನು ನೇಮಕ ಮಾಡಲು ಅನುಸರಿಸುವ ಮಾರ್ಗಸೂಚಿಯನ್ನೇ ಸಿಡಿಎಸ್ ನೇಮಕಾತಿಗೂ ಸರ್ಕಾರ ಅನುಸರಿಸುತ್ತದೆ. ಜನರಲ್ ನರವಣೆ ಅವರ ಕಾರ್ಯಕ್ಷಮತೆ ಮತ್ತು ಪೂರ್ವ ಲಡಾಖ್ ಬಿಕ್ಕಟ್ಟನ್ನು ಅವರು ನಿಭಾಯಿಸಿದ ರೀತಿಯನ್ನು ಗಮನಿಸಿದರೆ, ಸಿಡಿಎಸ್ ಹುದ್ದೆಗೆ ಅತ್ಯಂತ ಹೆಚ್ಚು ಪ್ರಭಾವಶಾಲಿಗಳೇ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನರಲ್ ನರವಣೆ ಮೂರೂ ಸೇನಾ ಮುಖ್ಯಸ್ಥರಲ್ಲಿ ಅತ್ಯಂತ ಹಿರಿಯರಾಗಿದ್ದಾರೆ. ಏಪ್ರಿಲ್‌ನಲ್ಲಿ ನಿವೃತ್ತರಾಗಲಿದ್ದಾರೆ. ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಅವರು ಕ್ರಮವಾಗಿ ಸೆಪ್ಟೆಂಬರ್ 30 ಮತ್ತು ನವೆಂಬರ್ 30ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಸಿಡಿಎಸ್ ಹುದ್ದೆಯ ಹಿನ್ನೆಲೆ : ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶದ ಭದ್ರತಾ ವ್ಯವಸ್ಥೆಯಲ್ಲಿನ ದೋಷಗಳನ್ನು ಪರಿಶೀಲಿಸಲು 1999ರಲ್ಲಿ ರಚಿಸಲಾದ ಉನ್ನತ ಮಟ್ಟದ ಸಮಿತಿಯು ಸಿಡಿಎಸ್ ನೇಮಕಕ್ಕೆ ಶಿಫಾರಸು ಮಾಡಿತು. ಜನರಲ್ ರಾವತ್ ಅವರು 2020ರ ಜನವರಿ 1ರಂದು ಭಾರತದ ಮೊದಲ ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಂಡರು.
ಅವರ ಅಧಿಕಾರಾವಧಿಯು ಮಾರ್ಚ್ 2023ರವರೆಗೆ ಇತ್ತು. ಸಿಡಿಎಸ್ಗೆ ನಿವೃತ್ತಿ ವಯಸ್ಸು 65 ವರ್ಷಗಳಾಗಿವೆ. ಸಿಡಿಎಸ್ ಮೂರು ಪಡೆಗಳ ಮುಖ್ಯಸ್ಥರು ಮಾತ್ರವಲ್ಲದೇ ರಕ್ಷಣಾ ಸಚಿವಾಲಯದ ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಮತ್ತು ರಕ್ಷಣಾ ಸಚಿವರ ಪ್ರಧಾನ ಸಲಹೆಗಾರರೂ ಆಗಿರುತ್ತಾರೆ.
ಇದನ್ನೂ ಓದಿ: ಹುತಾತ್ಮರಾಗುವ ಮೊದಲು ಕುಡಿಯಲು ನೀರು ಕೇಳಿದ್ದ ಸಿಡಿಎಸ್ ರಾವತ್