ಮುಂಬೈ : ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ತೀವ್ರ ವಾಗ್ದಾಳಿ ನಡೆಸಿದ ಶಿವಸೇನಾ ಸಂಸದ ಸಂಜಯ್ ರಾವತ್, ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳನ್ನು ಮುಗಿಸಲು "ಗುತ್ತಿಗೆ ಹತ್ಯೆಗಳು(contract killings)" ಈಗ "ಸರ್ಕಾರಿ ಹತ್ಯೆಗಳಾಗಿ" ಬದಲಾಗಿವೆ ಎಂದು ಆರೋಪಿಸಿದ್ದಾರೆ.
ಶಿವಸೇನಾ ನೇತೃತ್ವದ ಮಹಾ ವಿಕಾಸ ಅಘಡಿ (ಎಂವಿಎ) ಸರ್ಕಾರದಲ್ಲಿ ಕೆಲವು ಸಚಿವರು ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಇಡಿಯ ಕಣ್ಗಾವಲಿನಲ್ಲಿದ್ದಾರೆ. ಅವರಲ್ಲಿ ಒಬ್ಬರಾದರೂ ಸಿಬಿಐ ತನಿಖೆಯನ್ನು ಎದುರಿಸುತ್ತಿದ್ದಾರೆ ಎಂದು ರಾವತ್ ಹೇಳಿದ್ರು. ಇದೇ ವೇಳೆ ಕೇಂದ್ರ ತನಿಖಾ ಸಂಸ್ಥೆಗಳು "ದೆಹಲಿಯಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಗುತ್ತಿಗೆ ಕೊಲೆಗಾರರಂತೆ" ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ರು.
"ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ದಾಳಿಗಳನ್ನು ಗಮನಿಸಿದರೆ ಪ್ರತಿಯೊಬ್ಬರಿಗೂ ಇಲ್ಲಿ ಐಟಿ-ಇಡಿ ದಾಳಿ ನಡೆಸಲು ಇರಬೇಕಾದ ಕಾನೂನು ಅಥವಾ ನಿಯಮ ಇದೆಯೇ? ಎಂಬ ಪ್ರಶ್ನೆ ಮೂಡಿದೆ ಎಂದು ರಾವತ್ ಶಿವಸೇನಾ ಮುಖವಾಣಿ 'ಸಾಮ್ನಾ'ದಲ್ಲಿ ಬರೆದಿದ್ದಾರೆ.
ಈ ಹಿಂದೆ, ದೆಹಲಿ ಆಡಳಿತಗಾರರು ಸುಳ್ಳು ಹೇಳುತ್ತಿದ್ದರು. ಆದರೆ, ಈಗ ದೇಶದಲ್ಲಿ ಐಟಿ-ಇಡಿ ದಾಳಿಗಳು ಯಾವುದೇ ಬಂಡವಾಳ ಹೂಡಿಕೆಯಿಲ್ಲದೆ ಹೊಸ ವ್ಯಾಪಾರವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. "ರಾಜಕೀಯ ವಿರೋಧಿಗಳನ್ನು ತೆಗೆದು ಹಾಕಲು ಜನರ ಹಣವನ್ನು, ಸರ್ಕಾರದ ಯಂತ್ರಗಳನ್ನು ಬಳಸುತ್ತಿದೆ. ಈ ಹಿಂದೆ, ಮುಂಬೈನಲ್ಲಿ ಒಪ್ಪಂದದ ಕೊಲೆಗಳು ದಿನನಿತ್ಯ ನಡೆಯುತ್ತಿತ್ತು(ಅಂಡರ್ವರ್ಲ್ಡ್ ಸಕ್ರಿಯವಾಗಿದ್ದಾಗ).
ಪ್ರತಿಸ್ಪರ್ಧಿಗಳನ್ನು (ಗ್ಯಾಂಗ್‌ಗಳಿಂದ) ಕೊಲ್ಲಲು ಗುತ್ತಿಗೆ ಮೇಲೆ ಕೊಲೆಗಾರರನ್ನು ನೇಮಿಸಲಾಗುತ್ತಿತ್ತು. ಇದನ್ನು ಈಗ 'ಸರ್ಕಾರಿ ಹತ್ಯೆ' ಎಂದು ಬದಲಾಯಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳು ದೆಹಲಿಯಲ್ಲಿ ಅಧಿಕಾರದಲ್ಲಿರುವ ಪಕ್ಷದ ಗುತ್ತಿಗೆ ಕೊಲೆಗಾರರಾಗಿ ಕೆಲಸ ಮಾಡುತ್ತಿವೆ "ಎಂದು ರಾವತ್ ಗಂಭೀರ ಆರೋಪ ಮಾಡಿದ್ರು. ಈ ಏಜೆನ್ಸಿಗಳ ಮೂಲಕ ಅನಗತ್ಯ ರಾಜಕೀಯ ಪ್ರತಿಸ್ಪರ್ಧಿಗಳನ್ನು ಮುಗಿಸುವುದು ಹೊಸ ನೀತಿಯಾಗಿದೆ ಎಂದು ಅವರು ಹೇಳಿದ್ರು.
ಎನ್‌ಸಿಪಿ ನಾಯಕ ಮತ್ತು ರಾಜ್ಯ ಸಚಿವ ನವಾಬ್ ಮಲಿಕ್ ಅಳಿಯ ಸಮೀರ್ ಖಾನ್ ಅವರನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಬಂಧಿಸಿರುವುದನ್ನು ಉಲ್ಲೇಖಿಸಿದ ರಾವತ್, ಡ್ರಗ್ ದಂಧೆಯಲ್ಲಿ ಭಾಗಿಯಾಗಿರುವ ನೆಪವೊಡ್ಡಿ ಖಾನ್ ಅವರನ್ನು ಬಂಧಿಸಲಾಗಿದೆ ಮತ್ತು ಎಂಟು ತಿಂಗಳು ಜೈಲಿನಲ್ಲಿರಿಸಲಾಯಿತು. "ಈಗ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ. ಆದರೆ, ಸಮೀರ್ ಖಾನ್ ಬಳಿ ದೊರೆತ ಹರ್ಬಲ್ ಡ್ರಗ್ಸ್, ಡ್ರಗ್ಸ್ ಅಲ್ಲ ಎಂದು ಕೋರ್ಟ್ ಹೇಳಿದೆ. ಹೀಗಾಗಿ, ಮಲಿಕ್ ಎನ್‌ಸಿಬಿ ಅಧಿಕಾರಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಬೇಕು "ಎಂದು ಸಂಜಯ್ ರಾವತ್ ಬರೆದಿದ್ದಾರೆ.
ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಕುಟುಂಬ ಸದಸ್ಯರ ಮೇಲೆ ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ನಡೆಸಿದ ದಾಳಿಗಳನ್ನು ರಾವತ್ ಖಂಡಿಸಿದರು. 'ಪಿಎಂ ಕೇರ್ಸ್ ನಿಧಿ'ಯ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ. ಈ ನಿಧಿಯು ಸರ್ಕಾರಿ ನಿಧಿಯಲ್ಲ, ಬದಲಾಗಿ ಖಾಸಗಿ ನಿಧಿಯಾಗಿದೆ. ಕೋಟ್ಯಂತರ ರೂಪಾಯಿಗಳ ಹಣವನ್ನು ಪ್ರಧಾನ ಮಂತ್ರಿಯವರ ಹೆಸರಿನಲ್ಲಿ ಸಂಗ್ರಹಿಸಲಾಗುತ್ತಿದೆ "ಎಂದು ರಾವತ್ ಆರೋಪಿಸಿದ್ದಾರೆ.