ಹೈದರಾಬಾದ್ : ಟೆಕ್ ದೈತ್ಯ ಕಂಪನಿ ಗೂಗಲ್ ವಿಶೇಷ ಸಂದರ್ಭಗಳನ್ನು ತನ್ನ ಬಳಕೆದಾರರಿಗೆ ಆಕರ್ಷಕ ಡೂಡಲ್ ಮೂಲಕ ತಿಳಿಸುತ್ತಲೇ ಇರುತ್ತದೆ. ಸಾಧಕರಿಗೆ ಗೌರವ ಸಲ್ಲಿಸುವುದರಿಂದ ಹಿಡಿದು ತಿಂಡಿತಿನಿಸು, ಹಬ್ಬ-ಹರಿದಿನಗಳೂ ಸೇರಿದಂತೆ ಸ್ಮರಣೀಯ ಸಂದರ್ಭಗಳನ್ನು ಡೂಡಲ್ ಮೂಲಕ ತನ್ನ ಮುಖಪುಟದಲ್ಲಿ ಪ್ರದರ್ಶಿಸುತ್ತದೆ. ಅದರಂತೆ ಇಂದು ಜನಪ್ರಿಯ ಖಾದ್ಯವಾದ ಪಾನಿಪುರಿ ದಿನವನ್ನು ಕೂಡ ವಿಶೇಷವಾಗಿ ಆಚರಿಸುತ್ತಿದೆ.
2015ರ ಜುಲೈ 12ರಂದು ಮಧ್ಯಪ್ರದೇಶದ ಇಂದೋರ್‌ನ ರೆಸ್ಟೋರೆಂಟ್‌ವೊಂದು ತನ್ನ ಗ್ರಾಹಕರಿಗಾಗಿ 51 ವಿವಿಧ ರೀತಿಯ ಪಾನಿಪುರಿಗಳನ್ನು ತಯಾರಿಸಿತು. ಅಲ್ಲಿ ತಯಾರಿಸಲಾಗಿದ್ದ ಅಷ್ಟೂ ಪಾನಿಪುರಿಗಳು ಅತ್ಯಂತ ರುಚಿಕರವಾಗಿದ್ದರಿಂದ ಗೋಲ್ಡನ್ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಸ್ಥಾನ ನೀಡಲಾಗಿತ್ತು. ಅಂದಿನಿಂದ ಜುಲೈ 12 ಅನ್ನು 'ಪಾನಿಪುರಿ ದಿನ' ಎಂದು ಕರೆಯಲಾಗುತ್ತಿದೆ. ಇದೀಗ ಎಂಟು ವರ್ಷಗಳ ನಂತರ ಗೂಗಲ್ ಪಾನಿಪುರಿ ದಿನಾಚರಿಸುತ್ತಿದ್ದು, ಪಾನಿಪುರಿ ಗೇಮ್ ರಚಿಸಿದೆ.
ಆಲೂಗಡ್ಡೆ, ಕ್ಯಾರೆಟ್ ಹಾಗೂ ಮಸಾಲೆ ನೀರಿನಿಂದ ತುಂಬಿದ ಗರಿಗಿರಿಯಾದ ಪುರಿ ದಕ್ಷಿಣ ಏಷ್ಯಾದ ಬೀದಿಬದಿಯ ಜನಪ್ರಿಯ ಖಾದ್ಯ. ಗೂಗಲ್ ಡೂಡಲ್ ಪಾನಿಪುರಿ ಗೇಮ್ ಆಡಲು ಈ ಹಂತಗಳನ್ನು ಅನುಸರಿಸಿ..
- ಮೊದಲಿಗೆ, www.google.com ಎಂದು ಟೈಪ್ ಮಾಡಿ ಸೈಟ್ಗೆ ಭೇಟಿ ನೀಡಿ.
- ಸರ್ಚ್ ಇಂಜಿನ್ ಮೇಲೆ ಪ್ರದರ್ಶಿಸಲಾದ ಡೂಡಲ್ ಮೇಲೆ ಕ್ಲಿಕ್ಕಿಸಿ.
- ಗೇಮ್ ತೆರೆದುಕೊಂಡ ನಂತರ ಟೈಮ್ ಅಥವಾ ರಿಲ್ಯಾಕ್ಸ್ಮೋಡ್ ಆಪ್ಶನ್ಗಳಿದ್ದು, ನಿಮಗೆ ಬೇಕಾಗಿದ್ದನ್ನು ಆಯ್ಕೆ ಮಾಡಿ.
- ಗೇಮ್ ಪ್ರಾರಂಭವಾದ ನಂತರ ಗ್ರಾಹಕರು ಬಂದು ಕೇಳುವ ಪಾನಿಪುರಿಗಳ ಮೇಲೆ ಕ್ಲಿಕ್ ಮಾಡುತ್ತ ಗೇಮ್ ಆನಂದಿಸಿ.
ಮಹಾಭಾರತದ ಅವಧಿಯಲ್ಲಿ ದ್ರೌಪದಿ ಪಾನಿಪುರಿ ರೀತಿಯ ಖಾದ್ಯ ಕಂಡುಹಿಡಿದಳು ಎಂದು ಹೇಳಲಾಗುತ್ತದೆ. ದ್ರೌಪದಿಯ ಅತ್ತೆ ಕುಂತಿಯು ಎಲ್ಲ ಗಂಡಂದಿರ ಹಸಿವು ನೀಗಿಸಲು ಆಲೂಗಡ್ಡೆ ಮತ್ತು ಗೋದಿ ಹಿಟ್ಟು ಬಳಸಿ ಖಾದ್ಯ ತಯಾರಿಸಲು ದ್ರೌಪದಿಗೆ ಹೇಳಿದಳಂತೆ. ಈ ವೇಳೆ ದ್ರೌಪದಿ ಮಾಡಿದ ಖಾದ್ಯವು ಚಿಕ್ಕ ಗಾತ್ರದ ಪಾನಿಪುರಿಯಾಗಿದ್ದು, ಅದು ಪಾಂಡವರ ಹಸಿವು ನೀಗಿಸಲು ಸಹಾಯ ಮಾಡಿತು ಎಂಬ ಮಾಹಿತಿ ಇದೆ. ಜನಪ್ರಿಯ ಪಾನಿಪುರಿ ಖಾದ್ಯವನ್ನು ದೇಶಾದ್ಯಂತ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಗೋಲ್ಗಪ್ಪ ಎಂದು ಕರೆದರೆ, ಕರ್ನಾಟಕದಲ್ಲಿ ಪಾನಿಪುರಿ, ಪಶ್ಚಿಮ ಬಂಗಾಳ, ಬಿಹಾರದಲ್ಲಿ ಪುಚ್ಕಾ ಎಂದು ಕರೆಯುತ್ತಾರೆ.
ಇದನ್ನೂ ಓದಿ: ಡಾ.ಮಾರಿಯೋ ಮೊಲಿನಾರನ್ನು ಡೂಡಲ್ ಮೂಲಕ ಸ್ಮರಿಸಿದ ಗೂಗಲ್: ಯಾರಿವರು ಗೊತ್ತೇ?