ಭೋಪಾಲ್: ಭೋಪಾಲ್ನ ಯುವತಿಯೊಬ್ಬಳು ಬೆಂಗಳೂರಿನಲ್ಲಿ ಗೂಗಲ್ ಕಂಪನಿ ಮ್ಯಾನೇಜರ್ ಆಗಿರುವ ಯುವಕನನ್ನು ಒತ್ತೆಯಾಗಿಟ್ಟು, ಆತನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗ ಅದೇ ಯುವತಿ ಯುವಕನಿಗೆ ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಅಚ್ಚರಿಯ ಪ್ರಕರಣವೊಂದು ಭೋಪಾಲ್ನ ಕಮಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಕಮಲನಗರ ಪೊಲೀಸ್ ಠಾಣೆಯಲ್ಲಿ ಯುವಕ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೂರುದಾರ ಯುವಕನ ಹೆಸರು ಗಣೇಶ್ ಶಂಕರ್ ಗೋಪಾಲನ್. ಈತ ಭೋಪಾಲ್ನ ಕಸ್ತೂರ್ಬಾ ನಗರ ಗೋವಿಂದಪುರ ನಿವಾಸಿ. ಬೆಂಗಳೂರಿನಲ್ಲಿ ಗೂಗಲ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿನ್ನೆಲೆ ಏನು?: ಯುವಕ ದೂರಿನಲ್ಲಿ, ತಾನು ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ನಲ್ಲಿ ಓದುತ್ತಿದ್ದಾಗ ಆ ಯುವತಿಯನ್ನು ಭೇಟಿಯಾಗಿದ್ದೆ. ಆಗ ಪರಿಚಯವಾಗಿದ್ದ ಹುಡುಗಿ ತನ್ನನ್ನು ಮದುವೆಯಾಗಲು ಬಯಸಿದ್ದಳು. ಆದರೆ, ಯುವತಿಯನ್ನು ಮದುವೆಯಾಗಲು ನಾನು ನಿರಾಕರಿಸಿದ್ದೆನು. ಅದರ ನಂತರ ಅವರ ತಂದೆ 2020ರಲ್ಲಿ ನನ್ನ ಪೋಷಕರ ಬಳಿ ಮದುವೆ ಪ್ರಸ್ತಾಪ ಇಟ್ಟಿದ್ದರು. ಆಗಲೂ ಯುವಕ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಬಳಿಕ ಯುವತಿಯ ಕಡೆಯವರು ಯುವಕನಿಗೆ ಮದುವೆಯಾಗುವಂತೆ ಬೆದರಿಕೆ ಹಾಕಿದ್ದಾರೆ ಎಂದು ಯುವಕ ತನ್ನ ದೂರಿನಲ್ಲಿ ತಿಳಿಸಿದ್ದಾನೆ.
ಒಟ್ಟಾರೆ ಆಗಿದ್ದೇನು?: ಇದಾದ ಎರಡು ವರ್ಷಗಳ ಬಳಿಕ 2022ರ ಜೂನ್ನಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಯುವತಿ ಕೊನೆಯ ಬಾರಿಗೆ ತನ್ನನ್ನು ಭೋಪಾಲ್ಗೆ ಬಂದು ಭೇಟಿಯಾಗುವಂತೆ ಕರೆ ಮಾಡಿ ಹೇಳಿದ್ದಳಂತೆ. ಅದರಂತೆ ಗಣೇಶ್ ಭೋಪಾಲ್ಗೆ ಬಂದಿದ್ದಾನೆ. ಭೋಪಾಲ್ ವಿಮಾನ ನಿಲ್ದಾಣದಲ್ಲಿ ಇಳಿದ ಗಣೇಶ್ನನ್ನು ಯುವತಿಯ ಸೋದರ ಮಾವ ಹಾಗೂ ಸಹೋದರ ಕರೆದುಕೊಂಡು ಹೋಗಿ ನೆಹರು ನಗರ ಫ್ಲ್ಯಾಟ್ ಒಂದರಲ್ಲಿ ಕೂಡಿ ಹಾಕಿದ್ದಾರೆ.
ಕೂಡಿ ಹಾಕಿ ಥಳಿಸಿದ್ದಾರೆ. ಆಹಾರದಲ್ಲಿ ಅಮಲು ಬೆರೆಸಿ ನೀಡಿದ್ದಾರೆ. ಇದರಿಂದಾಗಿ ನಾನು ಪ್ರಜ್ಞೆ ಕಳಡದುಕೊಂಡಿದ್ದೆನು. ಹುಡುಗಿಯ ಸಹೋದರ ಹಾಗೂ ಸೋದರ ಮಾವ ಜೂನ್ 25ರಂದು ನಿಶ್ಚಿತಾರ್ಥ ಹಾಗೂ 26ರಂದು ಮದುವೆ ಎಂದು ಹೇಳಿದ್ದಾರೆ. ಯುವಕನನ್ನು ಬಲವಂತವಾಗಿ ನಿಶ್ಚಿತಾರ್ಥಕ್ಕೆ ಕರೆದುಕೊಂಡು ಹೋಗಿ, ಯುವತಿ ಹಾಗೂ ಆಕೆಯ ಕುಟುಂಬದವರೊಂದಿಗೆ ಯುವಕನಿಗೆ ಫೋಟೋಗೆ ಫೋಸ್ ಕೊಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದಾದ ನಂತರ ಯುವತಿ ಮತ್ತು ಆಕೆಯ ಮನೆಯವರು ಯುವಕಿನಿಗೆ ಮದುವೆಗೆ ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕಿದ್ದರು. ಇದಕ್ಕೆ ನಿರಾಕರಿಸಿದ ಯುವಕನಿಗೆ ಕುಟುಂಬಸ್ಥರು ವರದಕ್ಷಿಣೆಯ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ.
ಯುವತಿಯ ಕುಟುಂಬಸ್ಥರು ತಮಗೆ ಉನ್ನತ ಪೊಲೀಸ್ ಅಧಿಕಾರಿಗಳು ಗೊತ್ತಿದ್ದಾರೆ. ಅವರ ಮೂಲಕ ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ಜೈಲಿಗೆ ಹಾಕುತ್ತೇವೆ ಎಂದು ಹೇಳಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ನಿನ್ನ ಪೋಷಕರ ಮಾನಹಾನಿ ಮಾಡುವುದಾಗಿ ಹೇಳಿದ್ದಾರೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು: ಯುವಕ ನೀಡಿದ ದೂರಿನ ಮೇರೆಗೆ ಕಮಲನಗರ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಎಸ್ಐ ಸಂಜಯ್ ಶುಕ್ಲಾ ಮಾತನಾಡಿ, ಆರೋಪಿಗಳ ಹೇಳಿಕೆಗಳನ್ನು ತೆಗೆದುಕೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: 18 ಶಾಸಕರು ಸೇರಿ 25ಕ್ಕೂ ಹೆಚ್ಚು ಪ್ರಭಾವಿಗಳಿಗೆ ಹನಿಟ್ರ್ಯಾಪ್: ರಾಜಕೀಯ ಬಿರುಗಾಳಿ ಎಬ್ಬಿಸಿದ ಬ್ಲ್ಯಾಕ್‌ಮೇಲರ್ ದಂಪತಿ