ಭುವನೇಶ್ವರ (ಒಡಿಶಾ): ಒಡಿಶಾದಲ್ಲಿ ಮತ್ತೊಂದು ರೈಲು ದುರಂತ ನಡೆದಿದೆ. ಬುಧವಾರ ಜಾಜ್‌ಪುರ ರೋಡ್ ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್ ರೈಲು ಹರಿದು ಆರು ಮಂದಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇತರೆ ಹಲವರು ಗಂಭೀರ ಗಾಯಗೊಂಡಿದ್ದಾರೆ.
ಇಂದು ಸಂಜೆ ಜಾಜ್‌ಪುರ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಬೋಗಿಗಳ ಅಡಿಯಲ್ಲಿ ಕಾರ್ಮಿಕರು ಆಶ್ರಯ ಪಡೆದಿದ್ದರು. ಮಳೆಯಿಂದ ರಕ್ಷಿಸಿಕೊಳ್ಳಲು ಅವರು ರೈಲಿಗೆ ಕೆಳಗೆ ಹೋಗಿದ್ದರು. ಆದರೆ, ಹವಾಮಾನ ವೈಪರೀತ್ಯದಿಂದ ಉಂಟಾದ ಭಾರಿ ಮಾರುತದ ಪ್ರಭಾವದಿಂದಾಗಿ ಬಲವಾದ ಗಾಳಿ ಬೀಸಿದೆ. ಇದರಿಂದ ರೈಲು ಬೋಗಿ ಉರುಳಿ ಘಟನೆ ಸಂಭವಿಸಿತು ಎಂದು ತಿಳಿದು ಬಂದಿದೆ.
ಜೂನ್ 2ರಂದು ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಅಪಘಾತಕ್ಕೀಡಾಗಿ 288 ಮಂದಿ ಪ್ರಾಣ ಕಳೆದುಕೊಂಡಿದ್ದರು. ಸುಮಾರು 1,200 ಜನ ಗಾಯಗೊಂಡಿದ್ದರು. ಈ ರೈಲು ಅಪಘಾತದ ಹಿಂದೆ ವಿಧ್ವಂಸಕ ಸಂಚಿನ ಶಂಕೆ ವ್ಯಕ್ತವಾಗಿದ್ದು, ಸಿಬಿಐಗೆ ತನಿಖೆಯ ಹೊಣೆ ವಹಿಸಲಾಗಿದೆ. ಇದಾದ ಐದೇ ದಿನದಲ್ಲಿ ಈ ಘಟನೆ ಜರುಗಿದೆ.
ಅಸ್ಸಾಂನಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು : ಮತ್ತೊಂದೆಡೆ, ಕಲ್ಲಿದ್ದಲು ಸಾಗಿಸುತ್ತಿದ್ದ ಮತ್ತೊಂದು ಗೂಡ್ಸ್ ರೈಲು ಅಸ್ಸಾಂನ ಕಾಮ್ರೂಪ್ ಜಿಲ್ಲೆಯ ಬೊಕೊ ಬಳಿ ಹಳಿತಪ್ಪಿದೆ. ಅದೃಷ್ಟವಾತಶ್ ಈ ಘಟನೆಯಲ್ಲಿ ಯಾವುದೇ ಸಾವು ನೋವು ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.
ಈ ಬಗ್ಗೆ ಈಶಾನ್ಯ ಫ್ರಾಂಟಿಯರ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡೆ ಮಾಹಿತಿ ನೀಡಿದ್ದು, ಸುಮಾರು 50 ಬೋಗಿಗಳಿದ್ದ ಗೂಡ್ಸ್ ರೈಲು ಅಸೋನ್ಸೋಲ್ನಿಂದ ಬರುತ್ತಿತ್ತು. ಈ ಸಂದರ್ಭದಲ್ಲಿ ಬೊಕೋದ ಸಿಂಗ್ರಾ ರೈಲು ನಿಲ್ದಾಣದ ಬಳಿ ಕನಿಷ್ಠ 20 ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೂದಲೆಳೆ ಅಂತರದಲ್ಲಿ ತಪ್ಪಿದ ಮತ್ತೊಂದು ರೈಲು ದುರಂತ.. ಚಾಲಕನ ಸಮಯ ಪ್ರಜ್ಞೆಯಿಂದ ಬದುಕುಳಿದ ನೂರಾರು ಜೀವಗಳು!
ಜಾರ್ಖಂಡ್ನಲ್ಲಿ ತಪ್ಪಿದ ದೊಡ್ಡ ದುರಂತ: ಇದೇ ವೇಳೆ ಜಾರ್ಖಂಡ್ನಲ್ಲಿ ಭಾರಿ ರೈಲು ದುರಂತವೊಂದು ತಪ್ಪಿದೆ. ಮಂಗಳವಾರ ಸಂಜೆ ಬೊರಾಕೊ ಜಿಲ್ಲೆಯಲ್ಲಿ ಭುವನೇಶ್ವರದಿಂದ ದೆಹಲಿಗೆ ಹೋಗುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಆದರೆ, ಚಾಲಕನ ಸಮಯ ಪ್ರಜ್ಞೆಯಿಂದ ನೂರಾರು ಜನರ ಪ್ರಾಣ ಉಳಿದಿದೆ.
ಇಲ್ಲಿನ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್ನಲ್ಲಿ ಸಂಚರಿಸುತ್ತಿದ್ದಾಗ ರಾಜಧಾನಿ ಎಕ್ಸ್‌ಪ್ರೆಸ್ ಟ್ರ್ಯಾಕ್ಟರ್ ಟ್ರಾಲಿಗೆ ಗುದ್ದಿದೆ. ರೈಲ್ವೆ ಗೇಟ್ ಮುಚ್ಚಲು ವಿಳಂಬವಾಗಿತ್ತು. ಇದರ ನಡುವೆಯೇ ಟ್ರ್ಯಾಕ್ಟರ್ ಗೇಟ್ ದಾಟುತ್ತಿತ್ತು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ವೇಳೆ ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಆರ್‌ಪಿಎಫ್ ಹಾಗೂ ರೈಲ್ವೆ ಸಿಬ್ಬಂದಿಯ ನೆರವಿನಿಂದ ಟ್ರಾಲಿಯನ್ನು ಹೊರ ತೆಗೆಯಲಾಗಿದೆ. ಘಟನೆಯ ಗಂಭೀರತೆ ಹಿನ್ನೆಲೆಯಲ್ಲಿ ರೈಲ್ವೆ ಗೇಟ್ನಲ್ಲಿ ನಿಯೋಜಿಸಲಾಗಿದ್ದ ಗೇಟ್ಮನ್ನನ್ನು ರೈಲ್ವೆ ಇಲಾಖೆ ಸೇವೆಯಿಂದ ಅಮಾನತುಗೊಳಿಸಿ ಕಠಿಣ ಕ್ರಮ ಜರುಗಿಸಿದೆ.