ಅಮೃತಸರ(ಪಂಜಾಬ್): ಗೋಲ್ಡನ್ ಟೆಂಪಲ್‌ನಲ್ಲಿ ಸಿಖ್ಖರ ಪವಿತ್ರ ಗುರುಗ್ರಂಥ ಸಾಹಿಬ್ ಅಪವಿತ್ರಗೊಳಿಸಲು ಯತ್ನಿಸಿದ ವ್ಯಕ್ತಿಯನ್ನು ಸ್ಥಳೀಯರು ಹತ್ಯೆ ಮಾಡಿರುವ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 295ಎ, 307ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆ ವೇಳೆ ಕರ್ತವ್ಯದಲ್ಲಿದ್ದ ಸೇವಾದಾರ್ ಸದಾ ಸಿಂಗ್ ಅವರ ಹೇಳಿಕೆಯನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿನ್ನೆಯ ಘಟನೆಯ ನಂತರ ಗೋಲ್ಡನ್ ಟೆಂಪಲ್‌ಗೆ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದೇವೆ. ವಾರಾಂತ್ಯದಲ್ಲಿ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಎಸಿಪಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಯುವಕನೊಬ್ಬ ಸ್ವರ್ಣಮಂದಿರದಲ್ಲಿ ಪವಿತ್ರ ಗುರುಗ್ರಂಥ ಸಾಹಿಬ್ ಬಳಿಯ ಚಿನ್ನದ ಖಡ್ಗ ಕದಿಯಲು ಯತ್ನಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಶಿರೋಮಣಿ ಸಮಿತಿ ನೌಕರರು ಆತನನ್ನು ತಡೆದಿದ್ದಾರೆ. ಕೃತ್ಯದಿಂದ ಆಕ್ರೋಶಗೊಂಡ ಭಕ್ತರು ಯುವಕನನ್ನು ಹೊಡೆದು ಕೊಂದಿದ್ದಾರೆ.
ಇದನ್ನೂ ಓದಿ: ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ ಆರೋಪ : ಓರ್ವ ವ್ಯಕ್ತಿಯ ಹತ್ಯೆ