ಒಸ್ಮನಾಬಾದ್ (ಮಹಾರಾಷ್ಟ್ರ): ಜಿಲ್ಲೆಯ ವಾಶಿಮ್ ತಾಲೂಕಿನ ಗದ್ದೆಯೊಂದರಲ್ಲಿ ಆಕಾಶದಿಂದ ಬಂಗಾರದ ಕಲ್ಲೊಂದು ಬಿದ್ದಿದೆ! ಕಲಿಯುಗದಲ್ಲಿ ಇಂತಹದ್ದೊಂದು ಘಟನೆ ನಡೆಯಲು ಸಾಧ್ಯವೇ? ಇಲ್ಲಿರುವ ಸಾಕ್ಷಿಗಳು ನಿಮಗೂ ಆಶ್ಚರ್ಯ ತಂದಿಡಬಹುದು.
ಹೌದು, ಶುಕ್ರವಾರ ಬೆಳಗ್ಗೆ ಹೊಲದ ಮಾಲೀಕ ಪ್ರಭು ಎಂಬುವರು ತನ್ನ ಕೆಲಸದಲ್ಲಿ ತಲ್ಲೀನರಾದಾಗ ಥೇಟ್ ಚಿನ್ನವನ್ನು ಹೋಲುವಂತ ಕಲ್ಲು ಇದ್ದಕ್ಕಿದ್ದಂತೆ ಆಕಾಶದಿಂದ ಬಿದ್ದಿದ್ದು ಈ ಅಪರೂಪದ ಘಟನೆಯು ಸ್ಥಳೀಯರನ್ನು ಆಶ್ಚರ್ಯಕ್ಕೀಡು ಮಾಡಿದೆ. ಅಲ್ಲದೇ ಘಟನೆ ನಡೆದ ಬಳಿಕ ಆಕಾಶದಿಂದ ಉಲ್ಕೆ ಬೀಳುವ ಬಗ್ಗೆಯೂ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಭೂವಿಜ್ಞಾನ ಸಮೀಕ್ಷೆಯು ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿದೆ.
![golden color stone fell from the sky in Osmanabad](https://etvbharatimages.akamaized.net/etvbharat/prod-images/_2509newsroom_1632568587_675.jpeg)
ಗುರುವಾರ ರಾತ್ರಿ ಒಸ್ಮನಾಬಾದ್ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿತ್ತು. ತರಕಾರಿ ಬೆಳೆದಿದ್ದ ರೈತ ಪ್ರಭು ಶುಕ್ರವಾರ ಬೆಳಗ್ಗೆ ಹೊಲದಲ್ಲಿ ನೀರು ಇದೆಯೇ ಎಂಬುದನ್ನು ನೋಡಲು ಬಂದಿದ್ದರು. ಈ ವೇಳೆ, ಗದ್ದೆಯಲ್ಲಿ ಪರಿಶೀಲಿಸುತ್ತಿದ್ದಾಗ ರೈತ ಪ್ರಭು ನಿಂತ ಸ್ಥಳದಿಂದ ಏಳರಿಂದ ಎಂಟು ಅಡಿ ದೂರದಲ್ಲಿ ಎರಡು ಕಿಲೋ 38 ಗ್ರಾಂ ತೂಕದ ಚಿನ್ನದ ಕಲ್ಲು ಆಕಾಶದಿಂದ ಬಿದ್ದಿದೆ.
ಇದರಿಂದ ಗಾಬರಿಗೊಂಡ ರೈತ ತಕ್ಷಣ ಸ್ಥಳೀಯ ತಹಶೀಲ್ದಾರ್ ನರಸಿಂಗ್ ಜಾಧವ್ ಎಂಬುವರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಕಲ್ಲನ್ನು ವಶಕ್ಕೆ ಪಡೆದು ಪ್ರಾಥಮಿಕ ತಪಾಸಣೆಗಾಗಿ ಓಸ್ಮಾನಾಬಾದ್‌ನಲ್ಲಿರುವ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
ಕಲಿಯುಗದಲ್ಲಿ ಇಂತಹ ಅಪರೂಪದ ಕಾಯವೊಂದು ಆಕಾಶದಿಂದ ಏಕಾಏಕಿ ಭೂಮಿಗೆ ಅಪ್ಪಳಿಸಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆದಿವೆ. ಕಲ್ಲು ಚಿನ್ನದ ಬಣ್ಣದ್ದಾಗಿದ್ದು, ವಿವಿಧ ಪದರಗಳನ್ನು ಹೊಂದಿದೆ. 2 ಕೆಜಿ 38 ಗ್ರಾಂ ತೂಕ ಹೊಂದಿದ್ದು, ಈ ಕಲ್ಲು 7 ಇಂಚು ಉದ್ದ ಮತ್ತು 6 ಇಂಚು ಅಗಲವಿದೆ.